ಉಡುಪಿ: ಕಾಪು ತಾಲೂಕಿನ ಮುದರಂಗಡಿಯ ಉದ್ಯಮಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಅವರ ಭೀಕರ ಗುಂಡಿನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೃತ್ಯಕ್ಕೆ ಹಣಕಾಸಿನ ನೆರವು ನೀಡಿ ಒಳಸಂಚಿನಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಬಡಾ ಎರ್ಮಾಳ್ ಗ್ರಾಮದ ಅದಮಾರು ಮಠದ ಬಳಿಯ ಸದಾನಂದ ದೇವಾಡಿಗ ಅಲಿಯಾಸ್ ಸದಾನಂದ ಎ. (41) ಹಾಗೂ ಉಚ್ಚಿಲ ಬಡಾ ಗ್ರಾಮದ ಕಿಶೋರ್ ರಾಮ ಪೂಜಾರಿ (47) ಬಂಧಿತ ಆರೋಪಿಗಳು.
ಆಗಸ್ಟ್ 7ರಂದು ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್ ಕಚೇರಿ ಬಳಿ ಬೈಕ್‌ನಲ್ಲಿ ಬಂದ ಆರೋಪಿಗಳು ಡೇವಿಡ್ ಡಿಸೋಜಾ ಅವರ ತಲೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದರು.
ಈ ಪ್ರಕರಣದಲ್ಲಿ ಈಗಾಗಲೇ ನೇರವಾಗಿ ಭಾಗಿಯಾಗಿದ್ದ ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ವಾಜುಲ್ ಶೇಖ್ (ದೀಪಕ್) ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿತ್ತು. ಬಳಿಕ ಇವರಿಗೆ ಸೈಟ್ ರೇಖೆ (ರೆಕ್ಕೆ) ಮಾಡಲು ಹಣ ವರ್ಗಾಯಿಸಿದ್ದ ಮೊಹಮ್ಮದ್ ಇರ್ಷಾದ್ ಹಾಗೂ ಚಿರಾಗ್ ಪೂಜಾರಿಯನ್ನು ಬಂಧಿಸಲಾಗಿತ್ತು.
ಆರೋಪಿಗಳ ಬ್ಯಾಂಕ್ ಖಾತೆ, ಮೊಬೈಲ್ ಕರೆಗಳ ವಿವರ (CDR) ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಸುದೀರ್ಘ ಪರಿಶೀಲನೆ ನಡೆಸಿದಾಗ, ಕೊಲೆಗೆ ಹಣಕಾಸಿನ ನೆರವು ನೀಡಿದ ಪ್ರಮುಖ ರೂವಾರಿಗಳಾಗಿ ಸದಾನಂದ ದೇವಾಡಿಗ ಹಾಗೂ ಕಿಶೋರ್ ರಾಮ ಪೂಜಾರಿ ಭಾಗಿಯಾಗಿರುವುದು ದೃಢಪಟ್ಟಿತ್ತು. ಸದಾನಂದ ದೇವಾಡಿಗನಿಂದ 2 ಮೊಬೈಲ್ ಫೋನ್‌ಗಳು, 1 ಮೋಟಾರ್‌ಸೈಕಲ್ ಹಾಗೂ ನಗದು ಹಣ ವಶಪಡಿಸಿಕೊಂಡಿದ್ದಾರೆ. ಕಿಶೋರ್ ರಾಮ ಪೂಜಾರಿಯಿಂದ 3 ಮೊಬೈಲ್ ಫೋನ್‌ಗಳು ಹಾಗೂ 1 ಕ್ರೇಟಾ (Creta) ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಪ್ರಮುಖವಾಗಿ ಗುಂಡು ಹಾರಿಸಿದ ಆರೋಪಿ ರಾಜು ಎಂಬಾತ, ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ನಡೆಸಿದ ಆತ್ಮರಕ್ಷಣೆಯ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಪ್ರಸ್ತುತ ಆತ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.