ಉಡುಪಿ: ಬೈಕ್‌ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ : ಪ್ರಾಣಬಿಟ್ಟ  21 ವರ್ಷದ ಯುವಕ

ಮಣಿಪಾಲದಿಂದ ಊಟ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವಕ ಚಲಾಯಿಸುತ್ತಿದ್ದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದಿದ್ದು ಯುವಕ ಮೃತಪಟ್ಟಿದ್ದಾನೆ

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Udupi Road Accident
Udupi Road Accident

ಉಡುಪಿ: ಮಣಿಪಾಲದಿಂದ ಊಟ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವಕನೋರ್ವ ಚಲಾಯಿಸುತ್ತಿದ್ದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ರಭಸವಾಗಿ ಡಿಕ್ಕ ಹೊಡೆದ ಪರಿಣಾಮ, ಯುವಕ ಮೃತಪಟ್ಟ ದಾರುಣ ಘಟನೆ ತಡರಾತ್ರಿ ಸಂಭವಿಸಿದೆ.

ಲಭಿಸಿರುವ ಮಾಹಿತಿಯ ಪ್ರಕಾರ, ಸನತ್ ತನ್ನ ಸ್ನೇಹಿತರೊಂದಿಗೆ ಮಣಿಪಾಲಕ್ಕೆ ಬಂದು ಊಟ ಮುಗಿಸಿಕೊಂಡು, ಸ್ನೇಹಿತನಿಗೆ ಸೇರಿದ ಬುಲೆಟ್ ಬೈಕ್‌ನಲ್ಲಿ ಪರ್ಕಳ ಕಡೆಗೆ ಮನೆಗೆ ಹಿಂತಿರುಗುತ್ತಿದ್ದನು.

ತಡರಾತ್ರಿ ಹೆರ್ಗಾ ಗ್ರಾಮದ ಕೆಳಪರ್ಕಳ ಡೌನ್‌ನ ಗೋಪಾಲಕೃಷ್ಣ ದೇವಸ್ಥಾನದ ಬಳಿ ಅತಿ ವೇಗದಲ್ಲಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಸನತ್ ಬೈಕ್ ಸಮೇತ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದಾನೆ.

ಅಪಘಾತದ ರಭಸಕ್ಕೆ ಸನತ್ ಅವರ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತಾದರೂ, ಆಸ್ಪತ್ರೆಗೆ ತಲುಪಿಸುವಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Topics

ಸಂಬಂಧಿತ ಸುದ್ದಿಗಳು