ಬೈಂದೂರು: ಸೌಪರ್ಣಿಕಾ ನದಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಓರ್ವ ಪುರುಷ ಹಾಗೂ ಮಹಿಳೆಯ ಮೃತ ದೇಹ ಪತ್ತೆಯಾಗಿರುವ ಘಟನೆ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಾಲ್ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ವಿಠಲ ನಾಯ್ಕ್ (35 ವರ್ಷ) ಹಾಗೂ ಭವ್ಯ ಅಲಿಯಾಸ್ ನಿಶ್ಮಿತಾ (33 ವರ್ಷ) ಎಂದು ಗುರುತಿಸಲಾಗಿದೆ. ಮೃತ ವಿಠಲ ನಾಯ್ಕ್ ತನ್ನ ಪತ್ನಿಗೆ ಇಂಜೆಕ್ಷನ್ ಮೂಲಕ ವಿಷ ಪ್ರಾಶನ ಮಾಡಿಸಲು ಯತ್ನಿಸಿದ್ದಾನೆಂಬ ಆರೋಪವಿದೆ. ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೃತ ಮಹಿಳೆಯನ್ನು ನಿಶ್ಮಿತಾ ಎಂದು ಗುರುತಿಸಲಾಗಿದ್ದು, ವಿಠ್ಠಲ ನಾಯ್ಕ್ ಮತ್ತು ನಿಶ್ಮಿತಾ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ವಿಠ್ಠಲ ನಾಯ್ಕ್ ವಿರುದ್ದ ದಾಖಲಾಗಿದ್ದ ಪ್ರಕರಣದಲ್ಲಿ ನಿಶ್ಮಿತಾ ಅಲಿಯಾಸ್ ಭವ್ಯಳನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿತ್ತು.
ಕಳೆದ ಕೆಲವು ದಿನಗಳಿಂದಲೂ ಇಬ್ಬರು ನಾಪತ್ತೆಯಾಗಿದ್ದರು. ಎಲ್ಲೆಡೆ ಇಬ್ಬರೂ ಕೂಡ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಸೌಪರ್ಣಿಕಾ ನದಿಯಲ್ಲಿ ಇದೀಗ ಕೊಳೆತ ಸ್ಥಿತಿಯಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಬೈಂದೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.