Kannada News Next

udupi

ತಂತಿಬೇಲಿಗೆ ಅಕ್ರಮ ವಿದ್ಯುತ್ ಸಂಪರ್ಕ : ವಿದ್ಯುತ್ ಶಾಕ್‌ಗೆ ಯುವಕ ಬಲಿ

ಕವೀನಾ ಅ.2ರಂದು ಹೊಸಂಗಡಿ ಗ್ರಾಮದ ತಾರ್ಕಿಮಕ್ಕಿ ಕೆಪಿಸಿ ಚೆಕ್‌ಪೋಸ್ಟ್‌ ಬಳಿಯಿಂದ ನಾಪತ್ತೆಯಾಗಿದ್ದ.

By ಅಶ್ವಥ್ ಆಚಾರ್ಯ | Ashwath Acharya
illegal electric fence youth death electrocuted New

ಉಡುಪಿ : ತೋಟದ ಸುತ್ತ ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದ ತಂತಿಬೇಲಿಗೆ ಸಿಲುಕಿ ಯುವಕನೊಬ್ಬ ವಿದ್ಯುತ್ ಶಾಕ್‌ಗೆ ಬಲಿಯಾದ ಘಟನೆ ಹೊಸಂಗಡಿ ಗ್ರಾಮದ ಮಾತಿನಮಠದಲ್ಲಿ ನಡೆದಿದೆ. ತಾರ್ಕಿಮಕ್ಕಿ, ಹೊಸಂಗಡಿ ಗ್ರಾಮದ ನಿವಾಸಿ ರಘು ನಾಯ್ಕ ಅವರ ಪುತ್ರ ಕವೀನಾ (26) ಮೃತಪಟ್ಟ ಯುವಕ.

ಕವೀನಾ ಅ.2ರಂದು ಹೊಸಂಗಡಿ ಗ್ರಾಮದ ತಾರ್ಕಿಮಕ್ಕಿ ಕೆಪಿಸಿ ಚೆಕ್‌ಪೋಸ್ಟ್‌ ಬಳಿಯಿಂದ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಕವೀನಾ ಸಹೋದರ ಪ್ರವೀಣ ನಾಯ್ಕ ಅಮಾಸೆಬೈಲು ಪೊಲೀಸ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.

ಅ.5ರಂದು ಬೆಳಗ್ಗೆ 9.55ರ ಸುಮಾರಿಗೆ ಕವೀನಾನನ್ನು ಹುಡುಕುತ್ತಿದ್ದ ವೇಳೆ ವಸಂತ ಕುಮಾರ್ ಎಂಬವರು ದೂರವಾಣಿ ಮೂಲಕ ಹೊಸಂಗಡಿಯ ಮಾತಿನಮಠದಲ್ಲಿರುವ ಶೇಖರ ನಾಯ್ಕ ಅವರ ಮನೆಯ ತೋಟದ ಬಳಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವುದಾಗಿ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಕವೀನಾನ ಮೃತದೇಹವೆಂದು ಗುರುತಿಸಲಾಯಿತು.

ಮೃತದೇಹ ಅಂಗಾತ ಬಿದ್ದ ಸ್ಥಿತಿಯಲ್ಲಿದ್ದು, ದೇಹದ ಮೇಲೆ ಹುಳಗಳು ಹಾಗೂ ನೊಣಗಳು ಕಂಡುಬಂದಿದ್ದವು. ಅಲ್ಲದೆ, ಮೃತದೇಹ ಪತ್ತೆಯಾದ ಸ್ಥಳವು ಕವೀನಾನ ಮನೆಗೆ ತೆರಳುವ ಸಾಮಾನ್ಯ ದಾರಿಯಾಗಿರಲಿಲ್ಲ.

illegal electric fence youth death electrocuted New 1

ಮೃತನ ಕಾಲಿನಲ್ಲಿ ಚಪ್ಪಲಿಯೂ ಇರಲಿಲ್ಲ ಹಾಗೂ ಸುತ್ತಮುತ್ತಲೂ ಚಪ್ಪಲಿ ಪತ್ತೆಯಾಗಿರಲಿಲ್ಲ. ಇದರಿಂದ ಕವೀನಾನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.

ತನಿಖೆ ಮುಂದುವರಿದಂತೆ ಕವೀನಾ ತೋಟದ ಸುತ್ತ ಅಳವಡಿಸಿದ್ದ ತಂತಿಬೇಲಿಗೆ ನೀಡಲಾಗಿದ್ದ ವಿದ್ಯುತ್ ಪ್ರವಹಿಸಿ ಶಾಕ್‌ಗೆ ಒಳಗಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸಂಬಂಧಿಕರಿಗೆ ಹಣದ ಅವಶ್ಯಕತೆ ಇದೆ ಎಂಬ ದೂರವಾಣಿ ಮಾಹಿತಿ ತಿಳಿದು, ಹಣ ನೀಡುವ ಸಲುವಾಗಿ ಕವೀನಾ ಶೇಖರ ನಾಯ್ಕ ಅವರ ತೋಟದ ಮೂಲಕ ಅವರ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಆರೋಪದ ಪ್ರಕಾರ, ಕಾಡುಪ್ರಾಣಿಗಳಿಂದ ಕೃಷಿ ಬೆಳೆಗಳನ್ನು ರಕ್ಷಿಸುವ ಉದ್ದೇಶದಿಂದ ಶೇಖರ ನಾಯ್ಕ ಅವರು ತಮ್ಮ ವಾಸದ ಮನೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ತೋಟದ ಸುತ್ತಲಿನ ತಂತಿಬೇಲಿಗೆ ನೇರವಾಗಿ ಸಂಪರ್ಕಿಸಿದ್ದರು. ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ವಿದ್ಯುತ್ ಹರಿಯುವಂತೆ ಮಾಡಿದ್ದ ತಂತಿಬೇಲಿಗೆ ಕವೀನಾ ಆಕಸ್ಮಿಕವಾಗಿ ತಾಗಿ ಮೃತಪಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಸಾವಿನ ಕಾರಣ ಮರೆಮಾಚಿದ ಆರೋಪ

ಕವೀನಾ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿರುವುದು ಗೊತ್ತಾದ ಬಳಿಕ, ಪ್ರಕರಣ ತಮ್ಮ ವಿರುದ್ಧ ತಿರುಗಬಹುದೆಂಬ ಭೀತಿಯಿಂದ ಶೇಖರ ನಾಯ್ಕ ಅವರು ಮೃತದೇಹದ ಕೆಳಭಾಗದಲ್ಲಿದ್ದ ಬೇಲಿಯ ಎರಡು ತಂತಿಗಳನ್ನು ತುಂಡರಿಸಿ ಪಕ್ಕದ ಕಂಬಗಳಿಗೆ ಸುತ್ತಿ ಇಟ್ಟಿದ್ದರು. ಈ ಮೂಲಕ ವಿದ್ಯುತ್ ಶಾಕ್‌ನಿಂದ ಸಾವು ಸಂಭವಿಸಿರುವ ವಿಚಾರವನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.