Kannada News Next

udupi

ಅನಾರೋಗ್ಯದಿಂದ ಬಳಲುತ್ತಿದ್ದ ರಷ್ಯಾ ಪ್ರಜೆಯ ರಕ್ಷಣೆ; ಗುಣಮುಖನಾದ ಬಳಿಕ ಗೋವಾ ಪೊಲೀಸರಿಗೆ ಹಸ್ತಾಂತರ

ಪುನರ್ವಸತಿ ಕೇಂದ್ರದ ಸಂಚಾಲಕಿ ತನುಲಾ ತರುಣ್ ಅವರು ವಿದೇಶಿ ಪ್ರಜೆಗೆ ಊಟೋಪಚಾರದ ವ್ಯವಸ್ಥೆ ಮಾಡಿ ಮಾನವೀಯ ನೆರವು ನೀಡಿದರು.

By ಅಶ್ವಥ್ ಆಚಾರ್ಯ | Ashwath Acharya
Rescue of an ailing Russian national; handed over to Goa Police after recovery

ಉಡುಪಿ : ಕಲ್ಯಾಣಪುರ–ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಕುಸಿದುಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ರಷ್ಯಾ ದೇಶದ ಪ್ರಜೆಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಸೆ. 21ರಂದು ರಾತ್ರಿ ನಡೆದಿದೆ.

ಭಾರತದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಂದಿದ್ದ ರಷ್ಯಾ ಪ್ರಜೆಯೊಬ್ಬರು ಅನಾರೋಗ್ಯದಿಂದ ಬಳಲುತ್ತ ರಸ್ತೆಯಲ್ಲಿ ಕುಸಿದುಬಿದ್ದಿದ್ದರು. ಇದನ್ನು ಗಮನಿಸಿದ ನಿತ್ಯಾನಂದ ಒಳಕಾಡು ಅವರು ತಕ್ಷಣ ನೆರವಿಗೆ ಧಾವಿಸಿ, ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ವಿದೇಶಿ ಪ್ರಜೆಯಾಗಿದ್ದ ಹಿನ್ನೆಲೆಯಲ್ಲಿ ಘಟನೆಯ ಕುರಿತು ಉಡುಪಿ ನಗರ ಪೊಲೀಸರಿಗೂ ಮಾಹಿತಿ ನೀಡಿದ್ದರು.

ಪೊಲೀಸರ ವಿಚಾರಣೆ ವೇಳೆ ಪ್ರವಾಸಿಗನ ವೀಸಾ ಅವಧಿ ಮುಗಿದಿರುವುದು, ಪಾಸ್‌ಪೋರ್ಟ್ ನಿಷ್ಕ್ರಿಯಗೊಂಡಿರುವುದು ಹಾಗೂ ಗೋವಾ ರಾಜ್ಯದಲ್ಲಿ ಅವರ ವಿರುದ್ಧ ಪ್ರಕರಣವೊಂದು ವಿಚಾರಣೆಯಲ್ಲಿರುವುದು ತಿಳಿದುಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಆದರೆ, ಅಪರಾಧ ಪ್ರಕರಣದ ಭೀತಿಯಿಂದ ಅವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಬಳಿಕ ನಗರದಲ್ಲಿ ಸುತ್ತಾಡುತ್ತಿದ್ದ ಅವರನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದು ಮತ್ತೆ ಆಸ್ಪತ್ರೆಗೆ ದಾಖಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ರಾಮ್ ಅವರ ಸೂಚನೆಯಂತೆ, ಗುಣಮುಖರಾದ ವಿದೇಶಿ ಪ್ರಜೆಗೆ ಕಾರ್ಕಳದ ಹೊಸಬೆಳಕು ಪುನರ್ವಸತಿ ಕೇಂದ್ರದಲ್ಲಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಯಿತು.

ಅಲ್ಲದೆ, ರಷ್ಯಾದಲ್ಲಿರುವ ಅವರ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಪುನರ್ವಸತಿ ಕೇಂದ್ರದ ಸಂಚಾಲಕಿ ತನುಲಾ ತರುಣ್ ಅವರು ವಿದೇಶಿ ಪ್ರಜೆಗೆ ಊಟೋಪಚಾರದ ವ್ಯವಸ್ಥೆ ಮಾಡಿ ಮಾನವೀಯ ನೆರವು ನೀಡಿದರು. ಅವರ ಭದ್ರತೆಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸಂಪೂರ್ಣ ಚೇತರಿಸಿಕೊಂಡ ಬಳಿಕ ಉಡುಪಿ ಪೊಲೀಸರು ವಿದೇಶಿ ಪ್ರಜೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನಂತರ ಅವರನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುತುವರ್ಜಿಯಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಈ ಕಾರ್ಯಾಚರಣೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಸಹಕರಿಸಿದರು.