ಕೋಟ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗಾಗಿ ‘Adolescent Mental Health – Why and How?’ ಎಂಬ ವಿಷಯದ ಕುರಿತು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವೈಕುಂಠ ಬಾಳಿಗ ಆಸ್ಪತ್ರೆಯ ಕೌನ್ಸೆಲಿಂಗ್ ಸೈಕಾಲಜಿಸ್ಟ್ ಶ್ರೀ ಗಿರೀಶ್ ಎಂ. ಎನ್. ಭಾಗವಹಿಸಿ, ಹದಿಹರೆಯದ ವಿದ್ಯಾರ್ಥಿನಿಯರ ಮಾನಸಿಕ ಆರೋಗ್ಯ, ಸ್ವಯಂ ಅರಿವು, ಒತ್ತಡ ನಿರ್ವಹಣೆ ಹಾಗೂ ಆತ್ಮವಿಶ್ವಾಸ ವೃದ್ಧಿಯ ಕುರಿತು ಮಾರ್ಗದರ್ಶನ ನೀಡಿದರು. ಉತ್ತಮ ಮಾನಸಿಕ ಆರೋಗ್ಯವು ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿನಿಯರು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಶಾಲಾ ಗುರುತಿನ ಚೀಟಿ (ಐಡಿ ಕಾರ್ಡ್)ಗಳನ್ನು ವಿತರಿಸಲಾಯಿತು. ಶಾಲಾ ಐಡಿ ಕಾರ್ಡ್‌ಗಳ ಮಹತ್ವ ಹಾಗೂ ವಿದ್ಯಾರ್ಥಿನಿಯರ ಗುರುತು ಮತ್ತು ಸುರಕ್ಷತೆಯಲ್ಲಿ ಅವುಗಳ ಪಾತ್ರದ ಕುರಿತು ತಿಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟ ಬ್ರಿಗೇಡ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ವಹಿಸಿದ್ದರು. ಮಾಜಿ ಅಸಿಸ್ಟೆಂಟ್ ಗವರ್ನರ್ ಚಂದ್ರಶೇಖರ ಮೆಂಡನ್, ವಲಯ ಸೇನಾನಿ ದಯಾನಂದ್ ಆಚಾರ್ಯ ಹಾಗೂ ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪ್ರೇಮಾನಂದ್ ಉಪಸ್ಥಿತರಿದ್ದು ವಿದ್ಯಾರ್ಥಿನಿಯರಿಗೆ ಶುಭಹಾರೈಸಿದರು.
ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸದಸ್ಯರಾದ ಡಾ. ಗಣೇಶ್ ಹಾಗೂ ಪ್ರಕಾಶ್ ಹಂದಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.