News Next Kannada

udupi

ಸಮುದ್ರದಲ್ಲಿ ಪರ್ಸೀನ್ ಬೋಟ್ ಮುಳುಗಡೆ: ಕರಾವಳಿ ಕಾವಲು ಪಡೆಯಿಂದ 30 ಮೀನುಗಾರರ ರಕ್ಷಣೆ

ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮುದ್ರ ತೀರದ ಸಮೀಪ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್‌ಗೆ ಅಲೆಗಳ ಅಬ್ಬರದಿಂದ ಬಿರುಕು ಉಂಟಾಗಿ, ಬೋಟ್ ಮುಳುಗುವ ಪರಿಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ.

By ಅಶ್ವಥ್ ಆಚಾರ್ಯ | Ashwath Acharya
Sea Mishap Near Gangolli Coast Guard Rescues 30 Fishermen from Sinking Boat

ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮುದ್ರ ತೀರದ ಸಮೀಪ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್‌ಗೆ ಅಲೆಗಳ ಅಬ್ಬರದಿಂದ ಬಿರುಕು ಉಂಟಾಗಿ, ಬೋಟ್ ಮುಳುಗುವ ಪರಿಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ. ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಬೋಟ್‌ನಲ್ಲಿದ್ದ 30 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಗಂಗೊಳ್ಳಿಯಿಂದ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರೀ ಅಲೆಗಳ ಹೊಡೆತದಿಂದ ಬೋಟ್‌ಗೆ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಬೋಟ್‌ಗೆ ನೀರು ನುಗ್ಗಿ ನಿಧಾನವಾಗಿ ಮುಳುಗಲು ಆರಂಭಿಸಿದೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಕರಾವಳಿ ಮೀಸಲು ಪಡೆಯ ಇನ್ಸ್‌ಪೆಕ್ಟರ್ ರಮೇಶ್ ಕೆ. ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಬೋಟ್‌ನಲ್ಲಿದ್ದ 30 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ತೀರ ಪ್ರದೇಶಕ್ಕೆ ಕರೆತರಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.