ಸಾಲಿಗ್ರಾಮದಲ್ಲಿ ಅಪಘಾತಕ್ಕೆ ಕಡಿವಾಣ: 15 ಅಡಿ ಅಗಲದ ಅಂಡರ್‌ಪಾಸ್ ನಿರ್ಮಾಣಕ್ಕೆ ಒಮ್ಮತ
ಸಾಲಿಗ್ರಾಮದ ರಥಬೀದಿ ರಾಷ್ಟ್ರೀಯ ಹೆದ್ದಾರಿ 66ನ್ನು ಹಾದುಹೋಗಿರುವುದರಿಂದ ದೇವಳಕ್ಕೆ ಆಗಮಿಸುವ ಭಕ್ತರು ಹೆದ್ದಾರಿ ದಾಟಲು ತೊಂದರೆ ಅನುಭವಿಸುತ್ತಿದ್ದಾರೆ.
By ಅಶ್ವಥ್ ಆಚಾರ್ಯ | Ashwath Acharya
1 min read
ಉಡುಪಿ :ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶ್ರೀ ಗುರು ನರಸಿಂಹ ಹಾಗೂ ಶ್ರೀ ಆಂಜನೇಯ ದೇವಳದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಪಘಾತ ಹಾಗೂ ಭಕ್ತರ ರಸ್ತೆ ದಾಟುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 15 ಅಡಿ ಅಗಲದ ಅಂಡರ್‌ಪಾಸ್ ನಿರ್ಮಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಡಿಪಿಆರ್ ಸಿದ್ಧಪಡಿಸುತ್ತಿರುವ ಧ್ರುವ ಸಂಸ್ಥೆಯ ಎಂಜಿನಿಯರ್‌ಗಳು ಹಾಗೂ ದೇವಳದ ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚೆ ನಡೆಸಿದರು.
ಸಾಲಿಗ್ರಾಮದ ರಥಬೀದಿ ರಾಷ್ಟ್ರೀಯ ಹೆದ್ದಾರಿ 66ನ್ನು ಹಾದುಹೋಗಿರುವುದರಿಂದ ದೇವಳಕ್ಕೆ ಆಗಮಿಸುವ ಭಕ್ತರು ಹೆದ್ದಾರಿ ದಾಟಲು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಂಡರ್‌ಪಾಸ್ ನಿರ್ಮಿಸುವಂತೆ ಬಹುಕಾಲದಿಂದ ಬೇಡಿಕೆ ಇತ್ತು. ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಿರೂರಿನಿಂದ ತಲಪಾಡಿವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಅಪಘಾತ ಸಂಭವಿಸುವ ಸ್ಥಳಗಳು, ಅಂಡರ್‌ಪಾಸ್ ಹಾಗೂ ಮೇಲ್ಸೇತುವೆ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕುಂದಾಪುರದಿಂದ ಹೆಜಮಾಡಿ ಟೋಲ್‌ಗೇಟ್‌ವರೆಗೆ ದಿನಕ್ಕೆ ಆರರಿಂದ ಏಳು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಪಘಾತರಹಿತ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಾಲಿಗ್ರಾಮದ ದೇವಳದ ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಅಂಡರ್‌ಪಾಸ್ ನಿರ್ಮಾಣದ ಬೇಡಿಕೆ ಹಿಂದಿನಿಂದಲೂ ಇತ್ತು. ಇದೀಗ ಸ್ಥಳದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಡಿಪಿಆರ್ ಸಂಸ್ಥೆಯ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ 15 ಅಡಿ ಅಗಲದ ಅಂಡರ್‌ಪಾಸ್ ನಿರ್ಮಾಣಕ್ಕೆ ಒಮ್ಮತ ಮೂಡಿದೆ ಎಂದರು.
ಪ್ರಸ್ತುತ ನಡೆಯುತ್ತಿರುವ ಡಿಪಿಆರ್‌ನಲ್ಲಿ ಈ ಯೋಜನೆಯನ್ನು ಸೇರ್ಪಡೆಗೊಳಿಸಿ ಆದಷ್ಟು ಶೀಘ್ರ ಕಾಮಗಾರಿ ಕೈಗೊಳ್ಳುವ ಉದ್ದೇಶವಿದೆ. ಅಂಡರ್‌ಪಾಸ್ ನಿರ್ಮಾಣದಿಂದ ದೇವಳದ ಭಕ್ತರು ಸುರಕ್ಷಿತವಾಗಿ ಹೆದ್ದಾರಿ ದಾಟಿ ಸಂಚರಿಸಲು ಅನುಕೂಲವಾಗಲಿದೆ ಎಂದು ಸಂಸದರು ಹೇಳಿದರು. ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಧ್ರುವ ಸಂಸ್ಥೆಯ ಎಂಜಿನಿಯರ್‌ಗಳು, ದೇವಳದ ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Topics
ಸಂಬಂಧಿತ ಸುದ್ದಿಗಳು
udupi
ಕಾಂಗ್ರೆಸ್ ಮುಖಂಡ ಮುನಿಯಾಲು ಪರಮಾಪ್ತ ಸೂರಜ್ ಶೆಟ್ಟಿ ಸೇರಿ ಮೂವರು ಸಸ್ಪೆಂಡ್
udupi
ರಥಬೀದಿಯಲ್ಲಿ ಕಳೆಗಟ್ಟಿದ ಅಷ್ಟಮಿ ಸಡಗರ: ಲಕ್ಷಾಂತರ ಲಡ್ಡು-ಚಕ್ಕುಲಿ ಪ್ರಸಾದ ಸಿದ್ಧ, ಹುಲಿವೇಷಧಾರಿಗಳ ಅಬ್ಬರ
udupi
ಉಡುಪಿ: ಸರ್ಕಾರಿ ಅಕ್ಕಿ ಹೆಸರಿನಲ್ಲಿ ಬೆದರಿಕೆ ಹಾಕಿ ಸುಲಿಗೆಗೆ ಯತ್ನ: ಮೂವರು ಆರೋಪಿಗಳ ಬಂಧನ
udupi

