ಉಡುಪಿ: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಉಡುಪಿ ನಗರ ಹಾಗೂ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಮನೆ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು ಯಶಸ್ವಿ ಆಗಿದ್ದಾರೆ. ಬರೋಬ್ಬರಿ 23.56 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ವಶಕ್ಕೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.
ಕಳವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರನ್ನು ಉಡುಪಿ ಪೆರಂಪಳ್ಳಿ ನಿವಾಸಿ ಅರುಣ್ ಎಸ್.ವಿ. (43ವರ್ಷ) ಹಾಗೂ ತೆಂಕನಿಡಿಯೂರು ಗ್ರಾಮದ ಕೌಶೀಕ್ (19ವರ್ಷ) ಎಂದು ಗುರುತಿಸಲಾಗಿದೆ. ಪೆರಂಪಳ್ಳಿ ಸಂತೋಷನಗರದಲ್ಲಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪುತ್ತೂರು ಗ್ರಾಮದ ಭಗವತಿ ಲೇಔಟ್‌ನ ನಿವಾಸಿ ಸನಂ ಅವರು ದುಬೈಯಿಂದ ಊರಿಗೆ ಬಂದಿದ್ದು, ಆ.8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆ.11ರಂದು ಮನೆಗೆ ಮರಳಿದಾಗ ಟೆರೇಸ್‌ನ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಕಪಾಟಿನಲ್ಲಿದ್ದ 10 ಸಾವಿರ ದಿರ್ಹಾಮ್ ಹಾಗೂ ₹14 ಸಾವಿರ ನಗದು ಕಳವು ಮಾಡಿರುವುದು ಗಮನಕ್ಕೆ ಬಂದಿತ್ತು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ತನಿಖೆಯ ವೇಳೆ ಆರೋಪಿಗಳ ಸುಳಿವು ಪತ್ತೆಯಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಡುಪಿ ನಗರ ಹಾಗೂ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಇತರ ಕಳ್ಳತನ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಕಳವು ಮಾಡಿದ ಬೈಕ್‌ನಲ್ಲೇ ಸುತ್ತಾಟ
ಆರೋಪಿಗಳು ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು, ಕಳವು ಮಾಡಿದ್ದ ಪಲ್ಸರ್ ಬೈಕ್‌ನಲ್ಲಿ ತೆರಳಿ ಮನೆಗಳ ಬೀಗ ಮುರಿದು ಕಳ್ಳತನ ನಡೆಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 88.4 ಗ್ರಾಂ ಚಿನ್ನಾಭರಣ, 1 ಕೆ.ಜಿ. 360 ಗ್ರಾಂ ಬೆಳ್ಳಿ ಆಭರಣ, ಚಿನ್ನದ ನಾಣ್ಯಗಳು, 33 ಸಾವಿರ ನಗದು, ವಿದೇಶಿ ಕರೆನ್ಸಿ, ಎರಡು ಮೊಬೈಲ್‌ಗಳು, ವಿದೇಶಿ ಕೈಗಡಿಯಾರ, ಆಟೋರಿಕ್ಷಾ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ಸೇರಿದಂತೆ ಒಟ್ಟು ₹23,56,230 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆಯಿಂದ ಕೊಡಂಕೂರು, ಭಗವತಿ ಲೇಔಟ್, ನೇಜಾರು ಹಾಗೂ ಕೆಳಾರ್ಕಳಬೆಟ್ಟು ಪ್ರದೇಶಗಳಲ್ಲಿ ನಡೆದ ಐದು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿ ಅರುಣ್ ಆಚಾರಿ ಈ ಹಿಂದೆ ಮಣಿಪಾಲ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಒಂಬತ್ತು ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿ 2025ರ ಜುಲೈನಲ್ಲಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪಿಎಸ್‌ಐ ಪ್ರಕಾಶ್ ಹಾಗೂ ನಗರ ಮತ್ತು ಮಣಿಪಾಲ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.