Kannada News Next

udupi

ಶಿರ್ವ, ಉಡುಪಿ ನಗರ ಪೊಲೀಸರ ದಾಳಿ; ಗಾಂಜಾ, ಮೆಥಾಂಫೆಟಮೈನ್ ಸೇರಿ 16.01 ಲಕ್ಷ ಮೌಲ್ಯದ ಸೊತ್ತು ವಶ

ಶಿರ್ವ ಹಾಗೂ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟುಕೊಂಡಿದ್ದ

By ಅಶ್ವಥ್ ಆಚಾರ್ಯ | Ashwath Acharya
Shirva Udupi city police attack Assets worth 16.01 lakh including ganja methamphetamine were seized

ಉಡುಪಿ: ಶಿರ್ವ ಹಾಗೂ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟುಕೊಂಡಿದ್ದ ಆರೋಪದ ಮೇಲೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದ್ದು, ಗಾಂಜಾ, ಮೆಥಾಂಫೆಟಮೈನ್, ಕಾರುಗಳು, ಸ್ಕೂಟರ್, ಮೊಬೈಲ್ ಫೋನ್‌ಗಳು ಹಾಗೂ ನಗದು ಸೇರಿದಂತೆ ಒಟ್ಟು 16,01,584 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ನಾಜ್ ಅಲಿಯಾಸ್ ಮೊಹಮ್ಮದ್ ಅನಾಸ್, ಮೊಹಮ್ಮದ್ ಅಲ್ತಾಪ್, ಸ್ಟ್ಯಾನಿ ಸಂದೀಪ್, ಶಾಕೀಬ್, ಮೊಹಮ್ಮದ್ ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್ ಹಾಗೂ ಸಂತೋಷ್ ದೇವಾಡಿಗ ಬಂಧಿತರಾಗಿದ್ದಾರೆ.

ಸೆ.22ರಂದು ಕಾಪು ತಾಲೂಕು ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆಯಲ್ಲಿ ಎರಡು ಕಾರು ಹಾಗೂ ಸ್ಕೂಟರ್‌ನಲ್ಲಿ ಕೆಲವರು ಮಾದಕ ವಸ್ತುಗಳನ್ನು ಹೊಂದಿರುವ ಬಗ್ಗೆ ಕಾಪು ಠಾಣೆ ಪಿಎಸ್‌ಐ ಶುಭಕರ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಸಂಜೆ 4.35ರ ಸುಮಾರಿಗೆ ದಾಳಿ ನಡೆಸಿದಾಗ ಮಾದಕ ವಸ್ತುಗಳನ್ನು ಮಾರಾಟ ಉದ್ದೇಶದಿಂದ ಹೊಂದಿರುವುದು ಪತ್ತೆಯಾಗಿದೆ.

ಕಾರ್ಯಾಚರಣೆಯಲ್ಲಿ 1,354.28 ಗ್ರಾಂ ಗಾಂಜಾ (67,714), 32.74 ಗ್ರಾಂ ಮೆಥಾಂಫೆಟಮೈನ್ (1,30,960), ಎರಡು ಕಾರುಗಳು (10 ಲಕ್ಷ), ಸ್ಕೂಟರ್ (25 ಸಾವಿರ), 9 ಮೊಬೈಲ್‌ಗಳು (93,300), ಎರಡು ತೂಕದ ಯಂತ್ರಗಳು ಹಾಗೂ 75,010 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಅನಿಲ್ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತಂದು ಮಾರಾಟ ಮಾಡುತ್ತಿರುವುದಾಗಿ ತನಿಖೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಿವಳ್ಳಿಯಲ್ಲಿ ಮತ್ತೊಂದು ದಾಳಿ:

ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಾದಿರಾಜ ರಸ್ತೆಯ ಮೂರನೇ ಅಡ್ಡರಸ್ತೆಯ ಮನೆಯೊಂದರ ಮೇಲೆ ಸೆ.23ರಂದು ಮಧ್ಯರಾತ್ರಿ 12.10ರ ಸುಮಾರಿಗೆ ದಾಳಿ ನಡೆಸಿದ ಪೊಲೀಸರು, ಮಾರಾಟ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ 1 ಕೆಜಿ 659.91 ಗ್ರಾಂ ಗಾಂಜಾ ಹಾಗೂ 1,26,500 ನಗದನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಸಾಗರ ತಾಲೂಕಿನ ಶ್ರೀವತ್ಸ ಕೆ.ಜಿ. (31) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ಗಾಂಜಾ ತೂಕ ಮಾಡುವ ಡಿಜಿಟಲ್ ಸ್ಕೇಲ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಪ್ರಕಾಶ್ ತನಿಖೆ ನಡೆಸುತ್ತಿದ್ದಾರೆ.

ಬಂಧಿತರ ಪೈಕಿ ಕೆಲವರ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆಯೇ ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇಮ್ತಿಯಾಜ್ ವಿರುದ್ಧ ಒಟ್ಟು 8 ಪ್ರಕರಣಗಳು, ಮೊಹಮ್ಮದ್ ಫೈಜಲ್ ವಿರುದ್ಧ 3, ಅಜಯ್ ಕುಮಾರ್ ವಿರುದ್ಧ 3 ಹಾಗೂ ಸ್ಟ್ಯಾನಿ ಸಂದೀಪ್ ವಿರುದ್ಧ ಒಂದು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂತೋಷ್ ದೇವಾಡಿಗ ವಿರುದ್ಧ ಗಾಂಜಾ ಸೇವನೆಗೆ ಸಂಬಂಧಿಸಿದ ಎರಡು ಪ್ರಕರಣಗಳಿವೆ ಎಂದು ತಿಳಿಸಲಾಗಿದೆ.

ಎಎಸ್‌ಪಿ ಈಶಿತಾ ಗುಪ್ತಾ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಪಿ. ಮತ್ತು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಶಿರ್ವ ಪಿಎಸ್‌ಐ ಅನಿಲ್, ಕಾಪು ಪಿಎಸ್‌ಐ ಶುಭಕರ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿ ಹಾಗೂ ಸಿಇಎನ್ ಠಾಣೆ, ಮಣಿಪಾಲ ಠಾಣೆ ಮತ್ತು ಎಸ್‌ಒಸಿಒ ತಂಡದ ಸಿಬ್ಬಂದಿ ಕಾರ್ಯಾಚರಣೆಗೆ ಸಹಕರಿಸಿದ್ದಾರೆ.