ಉಡುಪಿ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Koteshwara suicide
Koteshwara suicide

ಉಡುಪಿಯ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಹೊದ್ರಾಳಿ ಕೊಳನಕಟ್ಟಿ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ ಪದ್ಮನಾಭ ಆಚಾರ್ಯ (37) ಎಂದು ಗುರುತಿಸಲಾಗಿದೆ. ಕುಂದಾಪುರದ ಹೆಂಚಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಕಳೆದ ನಾಲ್ಕು ತಿಂಗಳಿಂದ ಕೆಲಸಕ್ಕೆ ತೆರಳುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳಗ್ಗೆ ಮನೆಯಿಂದ ಹೋದವರು ರಾತ್ರಿ ವಾಪಸ್ ಬಾರದ ಕಾರಣ ಕುಟುಂಬದವರು ಆತಂಕಗೊಂಡಿದ್ದರು. ನಡುವೆ ಕೋಟಿತೀರ್ಥ ದೇವಸ್ಥಾನದ ಬಳಿ ಅವರ ದ್ವಿಚಕ್ರ ವಾಹನ ನಿಂತಿರುವುದು ಪತ್ತೆಯಾಯಿತು. ಪುಷ್ಕರಣಿಯ ಪೂರ್ವ ಭಾಗದ ಮೆಟ್ಟಿಲುಗಳ ಬಳಿ ಅವರ ಚಪ್ಪಲಿ ಹಾಗೂ ಟೋಪಿ ಸಿಕ್ಕಿದ್ದರಿಂದ ಅವರು ನೀರಿಗೆ ಹಾರಿರಬಹುದು ಎಂದು ಶಂಕಿಸಲಾಗಿತ್ತು.

ಬುಧವಾರ ಬೆಳಗ್ಗೆ ಸ್ಥಳೀಯ ಈಜುಗಾರರು ಬೋಟ್ ಮೂಲಕ ಶೋಧ ನಡೆಸಿದಾಗ ಸುಮಾರು 9 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಖ್ಯಾತ ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಅವರ ತಂಡ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ನೆರವಿನಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Topics

ಸಂಬಂಧಿತ ಸುದ್ದಿಗಳು