ಉಡುಪಿ: ಹನುಮಾನ್ ಪೆಟ್ರೋಲ್ ಬಂಕ್‌ನ ಹಿಂಭಾಗದಲ್ಲಿ ನಿಲ್ಲಿಸಿದ್ದ ಸುಮಾರು 40 ಲಕ್ಷ ಮೌಲ್ಯದ ಶ್ರೀ ದುರ್ಗಾಂಬ ಖಾಸಗಿ ಬಸ್‌ನ್ನು ಕಳವು ಮಾಡಿದ್ದ ಇಬ್ಬರು ಅಪರಿಚಿತರು, ಅದನ್ನು ಮುದುರಂಗಡಿ ಸಮೀಪದ ಮುದ್ದಾಡಿಯ ಹಾಡಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಕಳವಾದ ಬಸ್‌ನ್ನು ಉಡುಪಿ ನಗರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಕಟ್‌ಬೆಳ್ತೂರಿನ ಟಪ್ಪಾಲು ಮನೆ ನಿವಾಸಿ ಕೃಷ್ಣ (51 ವರ್ಷ) ಅವರು ಶ್ರೀ ದುರ್ಗಾಂಬ ಬಸ್‌ನ ನಿರ್ವಾಹಕರಾಗಿದ್ದಾರೆ.
ಕೆಎ 20 ಎಡಿ 1931 ನೋಂದಣಿ ಸಂಖ್ಯೆಯ ಈ ಬಸ್‌ನ್ನು ಸೆ.28ರಂದು ರಾತ್ರಿ 9.48ರ ಸುಮಾರಿಗೆ ಹನುಮಾನ್ ಪೆಟ್ರೋಲ್ ಬಂಕ್‌ನ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ರಾತ್ರಿ 10 ಗಂಟೆಗೆ ಕೃಷ್ಣ ಅವರು ಚಾಲಕ ರಾಯಿನ್ ಅವರೊಂದಿಗೆ ಸ್ಕೂಟರ್‌ನಲ್ಲಿ ಅಲ್ಲಿಂದ ತೆರಳಿದ್ದರು.
ಸೆ.29 ರಂದು ಬೆಳಗ್ಗೆ ಎಂದಿನಂತೆ ಪೆಟ್ರೋಲ್ ಬಂಕ್‌ಗೆ ಬಂದಾಗ ಬಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಬಸ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕೃಷ್ಣ ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಕಳವಾದ ಬಸ್‌ನ್ನು ಸೆ.29ರ ಬೆಳಗಿನ ಜಾವ ಸುಮಾರು 2 ಗಂಟೆಗೆ ಇಬ್ಬರು ಅಪರಿಚಿತರು ಸ್ಕೂಟರ್‌ನಲ್ಲಿ ಚಿಟ್ಪಾಡಿಯ ಹನುಮಾನ್ ಗ್ಯಾರೇಜ್‌ಗೆ ತಂದು, ಅಲ್ಲಿಂದ ಕಳವು ಮಾಡಿಕೊಂಡು ಹೋಗಿರುವುದು ತಿಳಿದುಬಂದಿದೆ.
ಬಳಿಕ ಬಸ್‌ನ್ನು ಮುದುರಂಗಡಿ ಸಮೀಪದ ಮುದ್ದಾಡಿಯ ಹಾಡಿಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು ಎನ್ನಲಾಗಿದೆ. ಪೊಲೀಸರು ಬಸ್‌ನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಪ್ರಕರಣ ದಾಖಲಾಗಿದೆ.