ಉಡುಪಿ : ಅಮಾಸೆಬೈಲು ಹಾಗೂ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1,19,720 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು, ನೆಲ್ಲಿಗದ್ದೆಯ ಮನೆಯವರು ಸೆ.4ರಂದು ಕಾರ್ಖಾನೆ ಕೆಲಸಕ್ಕೆ ತೆರಳಿದ್ದ ವೇಳೆ ಮಧ್ಯಾಹ್ನ 2.30ರಿಂದ 3.10ರ ನಡುವಿನ ಅವಧಿಯಲ್ಲಿ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿದ್ದರು. ಕೋಣೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಗೋದ್ರೇಜ್ ಬಾಗಿಲು ತೆರೆದು, ಬಟ್ಟೆಗಳ ನಡುವೆ ಕಾಗದದಲ್ಲಿ ಸುತ್ತಿ ಇಡಲಾಗಿದ್ದ 97 ಸಾವಿರ ರೂ. ನಗದು ಕಳವು ಮಾಡಿದ್ದರು. ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವೇಳೆ ಕುಳ್ಳುಂಜೆ ಗ್ರಾಮದ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಒಡೆದು ಸುಮಾರು 35ರಿಂದ 40 ಸಾವಿರ ರೂ. ನಗದು ಕಳವು ಮಾಡಿದ್ದ ಪ್ರಕರಣ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಅಮಾಸೆಬೈಲು ಠಾಣೆಯ ಪಿಎಸ್‌ಐ ಸುಧಾರಾಣಿ ಟಿ., ಶಂಕರನಾರಾಯಣ ಠಾಣೆಯ ಪಿಎಸ್‌ಐ ಯೂನಸ್ ಗಡ್ಕೆಕರ್ ಹಾಗೂ ಅಮಾಸೆಬೈಲು ಠಾಣೆಯ ಪಿಎಸ್‌ಐ ಭೀಮಾಶಂಕರ್ ಸಿನ್ನೂರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತು.
ತನಿಖೆ ಮುಂದುವರಿಸಿದ ಪೊಲೀಸರು ರಾಕೇಶ್ ಹೆಚ್. (28), ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ ಹಾಗೂ ನಂದೀಶ ಎಂ. (24), ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ ಎಂಬ ಆರೋಪಿಗಳನ್ನು ಹುಲಿಕಲ್ ಘಾಟ್ ಸಮೀಪ ಬಂಧಿಸಿದ್ದಾರೆ. ಆರೋಪಿಗಳಿಂದ ಕಳ್ಳತನದ 1,19,720 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್ಐ ಚಂದ್ರಶೇಖರ ಶೆಟ್ಟಿ, ಹೆಡ್‌ಕಾನ್‌ಸ್ಟೆಬಲ್‌ಗಳಾದ ರಾಘವೇಂದ್ರ, ನವೀನ್ ಕುಮಾರ್, ಸಚಿನ್ ಕುಲಾಲ್, ಪೊಲೀಸ್ ಸಿಬ್ಬಂದಿಗಳಾದ ಸುಧಾಕರ, ದಿನೇಶ್, ಮಂಜುನಾಥ, ಜಯರಾಮ ನಾಯ್ಕ್, ಚೇತನ್ ಕುಮಾರ್ ಸೇರಿದಂತೆ ಇತರ ಸಿಬ್ಬಂದಿ ಸಹಕರಿಸಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.