ಉಡುಪಿ : 8 ವರ್ಷಗಳ ಹಿಂದೆ ಮೃತಪಟ್ಟ ಮಗನ ಹೆಸರಲ್ಲಿ ₹5 ಲಕ್ಷಕ್ಕೆ ಬೇಡಿಕೆ: ತಂದೆಗೆ ಬೆದರಿಕೆ, ಇಬ್ಬರು ಅರೆಸ್ಟ್
ಉಡುಪಿ ಪೆರಂಪಳ್ಳಿ ಸಂತೋಷ್ ನಗರದ ಸಾಜೀದ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸೈಯದ್ ಸೈಫ್ ಅಹಮ್ಮದ್ ಎಂಬವರೇ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
By ಅಶ್ವಥ್ ಆಚಾರ್ಯ | Ashwath Acharya
1 min read
ಉಡುಪಿ : 8 ವರ್ಷದ ಹಿಂದೆಯೇ ಮೃತಪಟ್ಟಿದ್ದ ಮಗ ಹಣ ಬಾಕಿ ಇರಿಸಿದ್ದಾನೆಂದು ಆರೋಪಿಸಿ ತಂದೆಗೆ ಕರೆ ಮಾಡಿ ₹5ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಉಡುಪಿ ಪೆರಂಪಳ್ಳಿ ಸಂತೋಷ್ ನಗರದ ಸಾಜೀದ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸೈಯದ್ ಸೈಫ್ ಅಹಮ್ಮದ್ ಎಂಬವರೇ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಉಡುಪಿ ನಗರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ ?
ಉಡುಪಿ ಮೂಲದ ಅಜಿತ್ ಪಡಿಯಾರ್ ಅವರಿಗೆ ಜುಲೈ 2ರಂದು ಆರೋಪಿಗಳು ಕರೆ ಮಾಡಿದ್ದಾರೆ. ಅವರ ಮಗ ವಜ್ರದ ವ್ಯವಹಾರಕ್ಕೆ ಸಂಬಂಧಿಸಿದಂತೆ ₹5 ಲಕ್ಷ ಹಣ ಬಾಕಿ ಇರಿಸಿದ್ದಾನೆಂದು ಆರೋಪಿಸಿ, ಕೂಡಲೇ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ.
ಆದರೆ, ಅಜಿತ್ ಪಡಿಯಾರ್ ಮ್ಮ ಮಗ ಎಂಟು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ಆರೋಪಿಗಳಿಗೆ ತಿಳಿಸಿದ್ದಾರೆ. ಇದಾದ ಬಳಿಕವೂ ಆರೋಪಿಗಳು ಹಣ ನೀಡುವಂತೆ ಒತ್ತಡ ಮುಂದುವರಿಸಿದ್ದರು.
ದುಬೈ ನಲ್ಲಿರುವ ಮತ್ತೊಬ್ಬ ಮಗನಿಗೂ ಬೆದರಿಕೆ
ಅಜಿತ್ ಅವರು ಹಣ ನೀಡಲು ನಿರಾಕರಿಸಿದ ಬಳಿಕ, ದುಬೈಯಲ್ಲಿರುವ ಅವರ ಮತ್ತೊಬ್ಬ ಪುತ್ರ ಅಮೀತ್ ಅವರಿಗೂ ಆರೋಪಿಗಳು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ₹5 ಲಕ್ಷ ಹಣ ಪಾವತಿಸದಿದ್ದರೆ ದುಬೈಯಲ್ಲಿರುವ ಅಮೀತ್ ಅವರ ಪತ್ನಿಗೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಇದರ ಬೆನ್ನಲ್ಲೇ ಇದೀಗ ಅಜಿತ್ ಪಡಿಯಾರ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸೈಯದ್ ಸೈಫ್ ಅಹಮ್ಮದ್‌ನನ್ನು ಪೊಲೀಸ್ ಕಸ್ಟಡಿಗೆ ಪಡೆದು, ಬೆದರಿಕೆ ಕರೆಗಳು, ಹಣದ ಬೇಡಿಕೆ ಹಾಗೂ ಪ್ರಕರಣದ ಹಿನ್ನೆಲೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮೃತ ವ್ಯಕ್ತಿಯ ಹೆಸರಿನಲ್ಲಿ ಹಣ ಬಾಕಿ ಇದೆ ಎಂದು ಆರೋಪಿಸಿ ಕುಟುಂಬಸ್ಥರಿಗೆ ಬೆದರಿಕೆ ಹಾಕಿರುವ ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಆರೋಪಿಗಳು ನಿಜವಾಗಿಯೂ ಹಣದ ವ್ಯವಹಾರದ ಹಿನ್ನೆಲೆಯಿಂದ ಕರೆ ಮಾಡಿದ್ದರೇ ಅಥವಾ ಬೇರೆ ಉದ್ದೇಶದಿಂದ ಬೆದರಿಕೆ ಹಾಕಿದ್ದರೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Topics
ಸಂಬಂಧಿತ ಸುದ್ದಿಗಳು
udupi
ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಮಾಹಿತಿ ನೀಡಿ : ಉಡುಪಿ ಜಿಲ್ಲಾಡಳಿತದ ಸೂಚನೆ
udupi
ಬೈಂದೂರಿನಲ್ಲಿ 5.20 ಕೋಟಿ ವೆಚ್ಚದ ಆರೋಗ್ಯ ಕೇಂದ್ರಗಳ ಕಾಮಗಾರಿ ಪರಿಶೀಲನೆ
udupi
ಉಡುಪಿ ಜಿಲ್ಲೆಯ ಕಡಲತೀರ ಹಾಗೂ ಹಿನ್ನೀರು ಪ್ರವಾಸೋದ್ಯಮಕ್ಕೆ ಹೊಸ ಕಳೆ
udupi

