ಉಡುಪಿ : ಕೊಂಕಣ ರೈಲ್ವೆ ಕಾಮಗಾರಿಯ ಉಪಗುತ್ತಿಗೆ (ಸಬ್ ಕಾಂಟ್ರಾಕ್ಟ್) ನೀಡಿ, ನಂತರ ಕೆಲಸ ಪೂರ್ಣಗೊಂಡ ಬಳಿಕ ಒಪ್ಪಂದದಂತೆ ಹಣ ಪಾವತಿಸದೆ ವಂಚಿಸಲಾಗಿದೆ. ಆರ್ಥಿಕ ವಂಚನೆಯ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಕನ್ನರ್‌ಪಾಡಿ ನಿವಾಸಿ, ಗುತ್ತಿಗೆದಾರ ಹೃಷಿಕೇಶ್ ಜೆ. ಶೆಟ್ಟಿ ಎಂಬವರೇ ದೂರು ನೀಡಿದವರು. ಆರೋಪಿ ಪಿ. ರಾಮಚಂದ್ರ ಎಂಬುವವರು ಉಡುಪಿಯ ಇಂದ್ರಾಳಿಯಲ್ಲಿರುವ ರೈಲ್ವೆ ಗುತ್ತಿಗೆದಾರ ಕುಶಾಲ್ ಶೆಟ್ಟಿ ಅವರ ಕಚೇರಿಯಲ್ಲಿ ಹೃಷಿಕೇಶ್ ಅವರನ್ನು ಭೇಟಿಯಾಗಿದ್ದರು.
ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (KRCL) ನಿಂದ ತಮಗೆ ಮಂಜೂರಾಗಿದ್ದ ಕುಮುಟಾ ಮತ್ತು ಗೋಕರ್ಣ ರೈಲ್ವೆ ಕಾಮಗಾರಿಗಳನ್ನು ಸಬ್ ಕಾಂಟ್ರಾಕ್ಟ್ ಆಧಾರದ ಮೇಲೆ ನೀಡುವುದಾಗಿ ಪಿ. ರಾಮಚಂದ್ರ ಭರವಸೆ ನೀಡಿದ್ದರು. ಇದನ್ನು ನಂಬಿದ ಹೃಷಿಕೇಶ್ ಶೆಟ್ಟಿ ಅವರು ವಕೀಲರ ಮೂಲಕ ಕಾನೂನಾತ್ಮಕ ಒಪ್ಪಂದ ಸಿದ್ಧಪಡಿಸಿ, ಸಹಿ ಹಾಕಿ ಅಕ್ಟೋಬರ್ 2025 ರಲ್ಲಿ ಕಾಮಗಾರಿಯನ್ನು ಆರಂಭಿಸಿದ್ದರು.
ಕಾಮಗಾರಿ ಪ್ರಗತಿಯಲ್ಲಿದ್ದಾಗ ಗೋಕರ್ಣ ರೈಲ್ವೆ ನಿಲ್ದಾಣ ಹಾಗೂ ಮಡ್ಗಾಂ ರಬ್ಬರೈಸ್ಡ್ ಲೆವೆಲ್ ಕ್ರಾಸಿಂಗ್ ಪ್ಯಾಡ್‌ಗಳ ಹೆಚ್ಚುವರಿ ಕೆಲಸಗಳನ್ನು ಸಹ ಹೃಷಿಕೇಶ್ ಅವರಿಗೇ ನೀಡಲಾಗಿತ್ತು. ದೂರುದಾರರು ತಮ್ಮ ಸ್ವಂತ ಬಂಡವಾಳ, ಕಾರ್ಮಿಕರು, ಯಂತ್ರೋಪಕರಣಗಳು ಹಾಗೂ ಸಾಮಗ್ರಿಗಳನ್ನು ಬಳಸಿಕೊಂಡು ಎಲ್ಲಾ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.
ಆದರೆ, ಕಾಮಗಾರಿ ಮುಗಿದ ಬಳಿಕ ಒಪ್ಪಂದದ ಪ್ರಕಾರ ಕೊಡಬೇಕಿದ್ದ ₹94,81,554 (ತೊಂಬತ್ತನಾಲ್ಕು ಲಕ್ಷದ ಎಂಭತ್ತೊಂದು ಸಾವಿರದ ಐನೂರ ಐವತ್ನಾಲ್ಕು ರೂಪಾಯಿ) ಹಣವನ್ನು ಪಾವತಿಸದೆ, ಪಿ. ರಾಮಚಂದ್ರ ಅವರು ಉದ್ದೇಶಪೂರ್ವಕವಾಗಿ ವಂಚಿಸಿ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.