News Next Kannada

udupi

ಉಡುಪಿ: ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿ ಲಕ್ಷ ರೂ. ಕಳೆದುಕೊಂಡ ಉಡುಪಿ ವ್ಯಕ್ತಿ!

ಸಾಮಾಜಿಕ ಜಾಲತಾಣದಲ್ಲಿ ನಕಲಿ ಆನ್‌ಲೈನ್ ಟ್ರೇಡಿಂಗ್ ಹಾಗೂ ಇನ್‌ವೆಸ್ಟ್‌ಮೆಂಟ್ ಜಾಹೀರಾತು ನಂಬಿದ ಉಡುಪಿಯ ವ್ಯಕ್ತಿಯೊಬ್ಬರು ಬರೋಬ್ಬರಿ 19.59 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

By Meghana Pranuth | ಮೇಘನಾ ಪ್ರಣೂತ್‌
Udupi Cyber Crime News

ಉಡುಪಿ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕಂಡುಬಂದ ನಕಲಿ ಆನ್‌ಲೈನ್ ಟ್ರೇಡಿಂಗ್ ಮತ್ತು ಇನ್‌ವೆಸ್ಟ್‌ಮೆಂಟ್ ಜಾಹೀರಾತನ್ನು ನಂಬಿ ಉಡುಪಿಯ ವ್ಯಕ್ತಿಯೊಬ್ಬರು ಬರೋಬ್ಬರಿ 19.59 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 35 ವರ್ಷದ ಸಂದೀಪ್‌ ಉಡುಪಿಯ ನಿವಾಸಿಯಾಗಿದ್ದು, ವಂಚನೆಗೊಳಗಾದ ದುರ್ದೈವಿಯಾಗಿದ್ದಾರೆ.

ಸಂದೀಪ್ ಅವರು ತಮ್ಮ ಫೇಸ್‌ಬುಕ್ ಖಾತೆ ವೀಕ್ಷಿಸುತ್ತಿದ್ದಾಗ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವ ಕುರಿತಾದ ಆಕರ್ಷಕ ಜಾಹೀರಾತೊಂದು ಕಣ್ಣಿಗೆ ಬಿದ್ದಿತ್ತು. ಅದರಲ್ಲಿದ್ದ ವಿವರಗಳನ್ನು ಆಧರಿಸಿ ಸಂದೀಪ್ ಸಂಬಂಧಪಟ್ಟವರನ್ನು ಸಂಪರ್ಕಿಸಿದ್ದರು. ಈ ವೇಳೆ ವಂಚಕರು, "ನಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 6% ರಿಂದ 7% ನಷ್ಟು ಹೆಚ್ಚಿನ ಲಾಭ ಸಿಗಲಿದೆ" ಎಂದು ನಂಬಿಸಿದ್ದರು.

ಅವರ ಮಾತುಗಳನ್ನು ನಿಜವೆಂದು ನಂಬಿದ ಸಂದೀಪ್, ಆರೋಪಿಗಳು ಸೂಚಿಸಿದ ವಿವಿಧ ಕಂಪನಿ ಹಾಗೂ ಸಂಸ್ಥೆಗಳ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಆರಂಭಿಸಿದ್ದರು. NEFT ಹಾಗೂ IMPS ಮೂಲಕ ಒಟ್ಟು 19,59,320 ರೂಪಾಯಿಗಳನ್ನು ಹಂತ-ಹಂತವಾಗಿ ಪಾವತಿಸಿದ್ದರು.

ಹಣ ಪಾವತಿಸಿದ ನಂತರ, ವಂಚಕರು ಸಂದೀಪ್ ಅವರಿಗೆ ನೀಡಬೇಕಿದ್ದ ಮಾಸಿಕ ಲಾಭಾಂಶವನ್ನಾಗಲಿ ಅಥವಾ ಅವರು ಹೂಡಿಕೆ ಮಾಡಿದ್ದ ಮೂಲ ಹಣವನ್ನಾಗಲಿ ವಾಪಸ್ ನೀಡದೆ ಕೈಕೊಟ್ಟಿದ್ದಾರೆ. ಕೊನೆಗೆ ತಾವು ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಸಂದೀಪ್ ಪೊಲೀಸರ ಮೆಟ್ಟಿಲೇರಿದ್ದಾರೆ.

ಈ ಕುರಿತು ಉಡುಪಿಯ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಐಡಿ ಹಾಗೂ ಸೆನ್ ಪೊಲೀಸರು ಜಂಟಿಯಾಗಿ ತನಿಖೆ ಮುಂದುವರಿಸಿದ್ದಾರೆ.

 ಸಾಮಾಜಿಕ ಜಾಲತಾಣಗಳಲ್ಲಿ ಬರುವ "ಅಧಿಕ ಲಾಭದ ಭರವಸೆ ನೀಡುವ" ಯಾವುದೇ ಅನಾಮಧೇಯ ಟ್ರೇಡಿಂಗ್ ಹಾಗೂ ಇನ್‌ವೆಸ್ಟ್‌ಮೆಂಟ್ ಜಾಹೀರಾತುಗಳನ್ನು ನಂಬಿ ಹಣ ಹೂಡಿಕೆ ಮಾಡಬೇಡಿ. ಅಪರಿಚಿತ ಖಾತೆಗಳಿಗೆ ಹಣ ವರ್ಗಾಯಿಸುವ ಮುನ್ನ ಎಚ್ಚರ ವಹಿಸಿ.