News Next Kannada

world

ಅಮೆರಿಕದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಭಾರತೀಯರಿಗೆ ಬಿಗ್​ಶಾಕ್​!

ಈಗ ನ್ಯಾಯಾಲಯದ ಆಕ್ಷೇಪಣೆಗಳನ್ನು ದಾಟಲು ಹೊಸ ಆಡಳಿತಾತ್ಮಕ ತಂತ್ರಗಳನ್ನು ಹೂಡಿರುವ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆಯು ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಸ್ತಾವನೆಯನ್ನು ಪ್ರಕಟಿಸಿದೆ.

By ರಶ್ಮಿ ಎಸ್. | Rashmi S
america job layoffs h1b visa impact indians

ಅಮೆರಿಕದಲ್ಲಿ ನೆಲೆಸಲು ಬಯಸುವ ವಿದೇಶಿ ಐಟಿ ವೃತ್ತಿಪರರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ. ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆಯ ಮೂಲಕ ಹೊಸ ನಿಯಂತ್ರಣ ಪ್ರಕ್ರಿಯೆಯನ್ನು ರೂಪಿಸುತ್ತಿರುವ ಟ್ರಂಪ್ ಆಡಳಿತವು, ಪ್ರತಿಷ್ಠಿತ ಎಚ್-1ಬಿ ಮತ್ತು ಎಫ್-1 ಆಪ್ಷನಲ್ ಪ್ರ್ಯಾಕ್ಟಿಕಲ್ ಟ್ರೈನಿಂಗ್ ವೀಸಾ ಅರ್ಜಿಗಳ ಶುಲ್ಕವನ್ನು ಬರೋಬ್ಬರಿ $103,265 ಕ್ಕೆ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 98.8 ಲಕ್ಷ ರೂಪಾಯಿಗಳಿಗೆ ಭಾರಿ ಏರಿಕೆ ಮಾಡಲು ಗಂಭೀರ ಸಿದ್ಧತೆ ನಡೆಸಿದೆ.

ಕಳೆದ ವರ್ಷವಷ್ಟೇ ಟ್ರಂಪ್ ಸರ್ಕಾರವು ಒಂದು ಲಕ್ಷ ಡಾಲರ್ ವೀಸಾ ಶುಲ್ಕ ವಿಧಿಸುವ ಇಂತಹುದೇ ಪ್ರಸ್ತಾವನೆಯನ್ನು ತರಲು ಪ್ರಯತ್ನಿಸಿತ್ತಾದರೂ ಮ್ಯಾಸಚೂಸೆಟ್ಸ್‌ನ ಫೆಡರಲ್ ಜಿಲ್ಲಾ ನ್ಯಾಯಾಲಯ ಮತ್ತು ಮೇಲ್ಮನವಿ ನ್ಯಾಯಾಲಯಗಳು ಈ ಆದೇಶಕ್ಕೆ ತಡೆ ನೀಡಿ ತೀವ್ರ ಹಿನ್ನಡೆ ಉಂಟುಮಾಡಿದ್ದವು. ಆದರೆ, ಈಗ ನ್ಯಾಯಾಲಯದ ಆಕ್ಷೇಪಣೆಗಳನ್ನು ದಾಟಲು ಹೊಸ ಆಡಳಿತಾತ್ಮಕ ತಂತ್ರಗಳನ್ನು ಹೂಡಿರುವ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆಯು ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಸ್ತಾವನೆಯನ್ನು ಪ್ರಕಟಿಸಿದೆ. ಸದ್ಯ ಈ ವಿವಾದಾತ್ಮಕ ನಿಯಮವು ಶ್ವೇತಭವನದ ಬಜೆಟ್ ಕಚೇರಿಯ ಪರಿಶೀಲನೆಯಲ್ಲಿದ್ದು, ಜಾರಿಗೆ ಬಂದರೆ ವಿದೇಶಿ ನೌಕರರನ್ನು ಪ್ರಾಯೋಜಿಸುವ ಜಾಗತಿಕ ಕಂಪನಿಗಳ ಮೇಲಿನ ಆರ್ಥಿಕ ಹೊರೆ ಗಣನೀಯವಾಗಿ ಹೆಚ್ಚಾಗಲಿದೆ.

ಈ ಪ್ರಸ್ತಾವಿತ ಶುಲ್ಕ ಹೆಚ್ಚಳವು ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರ ಮೇಲೆ ನೇರ ಮತ್ತು ತೀವ್ರವಾದ ಪರಿಣಾಮ ಬೀರಲಿದೆ. ಏಕೆಂದರೆ, ಅಮೆರಿಕ ಪ್ರತಿ ವರ್ಷ ನೀಡುವ ಒಟ್ಟು ಎಚ್-1ಬಿ ವೀಸಾಗಳ ಪೈಕಿ ಶೇಕಡಾ 70 ಕ್ಕಿಂತಲೂ ಹೆಚ್ಚು ವೀಸಾಗಳನ್ನು ಭಾರತೀಯ ಮೂಲದ ಐಟಿ ತಜ್ಞರು ಹಾಗೂ ಉದ್ಯೋಗಾಕಾಂಕ್ಷಿಗಳೇ ಪಡೆದುಕೊಳ್ಳುತ್ತಾರೆ. ಇದರೊಂದಿಗೆ, ಮತ್ತೊಂದು ಆಘಾತಕಾರಿ ನಿಯಮವಾಗಿ ಉದ್ಯೋಗ ಕಳೆದುಕೊಂಡ ವೀಸಾಧಾರಕರಿಗೆ ಹೊಸ ಕೆಲಸ ಹುಡುಕಿಕೊಳ್ಳಲು ಪ್ರಸ್ತುತ ನೀಡಲಾಗುತ್ತಿರುವ 60 ದಿನಗಳ ಕಾಲಾವಕಾಶದ ಸೌಲಭ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಸಹ ಟ್ರಂಪ್ ಆಡಳಿತ ಚಿಂತನೆ ನಡೆಸಿದೆ. ಈ ನಿಯಮವೇನಾದರೂ ಅಧಿಕೃತಗೊಂಡರೆ, ಕೆಲಸ ಕಳೆದುಕೊಂಡ ತಕ್ಷಣವೇ ಭಾರತೀಯ ಉದ್ಯೋಗಿಗಳು ತಮ್ಮ ಕುಟುಂಬದೊಂದಿಗೆ ಅಮೆರಿಕ ಬಿಟ್ಟು ತಾಯ್ನಾಡಿಗೆ ಮರಳಬೇಕಾದ ಕಠಿಣ ಪರಿಸ್ಥಿತಿ ನಿರ್ಮಾಣವಾಗಲಿದೆ.