Courtney Clenney : ಬಾಯ್‌ಫ್ರೆಂಡ್ ಹತ್ಯೆ ಪ್ರಕರಣ ಮಾಡೆಲ್ ಕೋರ್ಟ್ನಿ ಕ್ಲೆನ್ನಿಗೆ 6 ವರ್ಷ ಜೈಲು ಶಿಕ್ಷೆ
ಕೋರ್ಟ್ನಿ ಕ್ಲೆನ್ನಿ Courtney Tailor ಹೆಸರಿನಿಂದಲೂ ಪ್ರಸಿದ್ಧರಾಗಿದ್ದರು. ಫಿಟ್ನೆಸ್ ಮಾಡೆಲ್, ಓನ್ಲಿ ಫ್ಯಾನ್ಸ್ ( OnlyFans) ಕ್ರಿಯೇಟರ್‌ಗೆ ಇನ್‌ಸ್ಟಾದಲ್ಲಿ 20 ಲಕ್ಷ ಫಾಲೋವರ್ಸ್
By Arun Gundmi | ಅರುಣ್ ಗುಂಡ್ಮಿ · Editor-in-Chief
2 min read
ಮಿಯಾಮಿ: ಬಾಯ್‌ಫ್ರೆಂಡ್ ಕ್ರಿಶ್ಚಿಯನ್ ಒಬುಮ್ಸೆಲಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಓನ್ಲಿ ಫ್ಯಾನ್ಸ್ (OnlyFans)ಮಾಡೆಲ್ ಕೋರ್ಟ್ನಿ ಕ್ಲೆನ್ನಿಗೆ ನ್ಯಾಯಾಲಯ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2022ರಲ್ಲಿ ನಡೆದಿದ್ದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಿ ಕ್ಲೆನ್ನಿ ವಿರುದ್ಧ ದಾಖಲಾಗಿದ್ದ ಎರಡನೇ ಹಂತದ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯು ಮ್ಯಾನ್‌ಸ್ಲಾಟರ್ (Manslaughter) ಆರೋಪದ ಅಡಿಯಲ್ಲಿ ತಪ್ಪೋಪ್ಪಿಕೊಂಡಿದ್ದಾಳೆ.
2026ರ ಆಗಸ್ಟ್ 10 ರಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕೋರ್ಟ್ನಿ ಕ್ಲೆನ್ನಿ, 27 ವರ್ಷದ ತನ್ನ ಬಾಯ್‌ಫ್ರೆಂಡ್ ಕ್ರಿಶ್ಚಿಯನ್ ಒಬುಮ್ಸೆಲಿ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಪ್ಪನ್ನು ಅನ್ನು ಒಪ್ಪಿಕೊಂಡಿದ್ದರು, ಇದರ ಎರಡನೇ ಹಂತದ ಕೊಲೆ ಆರೋಪದ ಬದಲು ಮ್ಯಾನ್‌ಸ್ಲಾಟರ್ ಆರೋಪಕ್ಕೆ ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯವು ಇದೀಗ ಮಾಡೆಲ್‌ಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜೈಲು ಶಿಕ್ಷೆಯ ನಂತರ ಕೋರ್ಟ್ನಿಗೆ 5 ವರ್ಷಗಳ ಪ್ರೊಬೇಷನ್ ಕೂಡ ಇರಲಿದೆ. ಅಲ್ಲದೇ ಮಾನಸಿಕ ಆರೋಗ್ಯ ಮೌಲ್ಯಮಾಪನ ಹಾಗೂ ಚಿಕಿತ್ಸೆ ಪಡೆಯುವಂತೆಯೂ ನ್ಯಾಯಾಲಯ ಸೂಚನೆಯನ್ನು ನೀಡಿದೆ.
ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಘಟನೆ
ಕ್ರಿಶ್ಚಿಯನ್ ಒಬುಮ್ಸೆಲಿ ಮತ್ತು ಕೋರ್ಟ್ನಿ ಕ್ಲೆನ್ನಿ ನಡುವಿನ ಸಂಬಂಧ ವಿವಾದಕ್ಕೆ ಕಾರಣವಾಗಿತ್ತು. 2022ರ ಎಪ್ರಿಲ್‌ನಲ್ಲಿ ಮಿಯಾಮಿಯ ಎಡ್ಜ್‌ವಾಟರ್ ಪ್ರದೇಶದಲ್ಲಿ ಇರುವ ಅವರ ಕಾಂಡೋದಲ್ಲಿ ಒಬುಮ್ಸೆಲಿ ಚಾಕು ಇರಿತದಿಂದ ಸಾವನ್ನಪ್ಪಿದ್ದರು.
ಘಟನೆಯ ಬೆನ್ನಲ್ಲೇ ಕೋರ್ಟ್ನಿ ಕ್ಲೆನ್ನಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಆಕೆಯ ವಿರುದ್ಧ ಎರಡನೇ ಹಂತದ ಕೊಲೆ ಆರೋಪವನ್ನೂ ದಾಖಲಿಸಲಾಗಿತ್ತು. ಆರೋಪ ಸಾಬೀತಾದರೆ ಗರಿಷ್ಠ 30 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇತ್ತು. ಆದರೆ ಕೋರ್ಟ್ನಿ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದು, ತನ್ನ ಆತ್ಮರಕ್ಷಣೆಗಾಗಿ ಚಾಕು ಬಳಸಿದ್ದಾಗಿ ಹೇಳಿಕೊಂಡಿದ್ದರು. ತನಿಖಾಧಿಕಾರಿಗಳ ಮುಂದೆ ಮಾತನಾಡುವ ವೇಳೆ, ಒಬುಮ್ಸೆಲಿ ತನ್ನ ಬಳಿ ಬರಬಾರದು ಎಂದು ಎಚ್ಚರಿಸಲು ಚಾಕು ಹಿಡಿದಿದ್ದೆ ಎಂದು ಆಕೆ ಹೇಳಿದ್ದಳು.
ಆದರೆ ವಿಚಾರಣೆಯ ವೇಳೆಯಲ್ಲಿ ಕೋರ್ಟ್ನಿಯೇ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದಳು ಎಂದು ವಾದಿಸಿತ್ತು. ಅಲ್ಲದೇ ಲಭ್ಯವಾದ ವಿಡಿಯೋ ಮತ್ತು ಇತರ ಸಾಕ್ಷ್ಯಗಳನ್ನು ಉಲ್ಲೇಖಿಸಿ, ಒಬುಮ್ಸೆಲಿ ವಿರುದ್ಧ ನಡೆದಿದ್ದ ಹಿಂಸಾಚಾರದ ಮಾದರಿಯನ್ನು ಪ್ರಾಸಿಕ್ಯೂಷನ್ ನ್ಯಾಯಾಲಯದ ಗಮನಕ್ಕೆ ತಂದಿತ್ತು.
ಒಬುಮ್ಸೆಲಿ ಕುಟುಂಬಕ್ಕೆ ಮರೆಯಲಾರದ ನೋವು
ಕೋರ್ಟ್ನಿ ಕ್ಲೆನ್ನಿ plea deal ಒಪ್ಪಿಕೊಂಡ ಸಂದರ್ಭದಲ್ಲಿ ಒಬುಮ್ಸೆಲಿ ಕುಟುಂಬದ ಸದಸ್ಯರು ಖುಡ ನ್ಯಾಯಾಲಯದಲ್ಲಿ ಹಾಜರಿದ್ದರು. ಅವರ ತಾಯಿ ತನ್ನ ಮಗನನ್ನು ಕಳೆದುಕೊಂಡಿರುವ ನೋವನ್ನು ಹಂಚಿಕೊಂಡಿದ್ದರು.
ಮಗನನ್ನು ಕಳೆದುಕೊಂಡ ನಂತರದಲ್ಲಿ, ಮನೆಯಲ್ಲಿ ಹಬ್ಬದ ಸಂಭ್ರಮವೇ ಮರೆತು ಹೋಗಿದೆ. ಕುಟುಂಬದ ಜೊತೆಗೆ ನಡೆಯಬೇಕಾಗಿದ್ದ ಅನೇಕ ಕ್ಷಣಗಳು ಶಾಶ್ವತವಾಗಿ ಕಳೆದುಕೊಂಡಿದ್ದೇವೆ ಎಂದಿದ್ದಾರೆ. ತಾಯಿಯ ಹೇಳಿಕೆಗೆ ಕೋರ್ಟ್ನಿ ಕ್ಲೆನ್ನಿ ಭಾವುಕರಾಗಿ ಕಣ್ಣೀರಿಟ್ಟರು . ಮತ್ತೊಂದೆಡೆಯಲ್ಲಿ ಕೋರ್ಟ್ನಿಯ ತಂದೆ ಕಿಮ್ ಕ್ಲೆನ್ನಿ, plea deal ಮೂಲಕ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದ ಕಾನೂನು ಹೋರಾಟಕ್ಕೆ ತಾರ್ತಿಕ ಅಂತ್ಯ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ತಮ್ಮ ಮಗಳಿಗೆ ಮುಂದೆ ಜೀವನವಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಪ್ರಾಸಿಕ್ಯೂಷನ್ ಹೇಳಿದ್ದೇನು ?
ಮಿಯಾಮಿ-ಡೇಡ್ ಸ್ಟೇಟ್ ಅಟಾರ್ನಿ ಕಚೇರಿಯ ಪ್ರಕಾರ, ಕೋರ್ಟ್ನಿ ಕ್ಲೆನ್ನಿ ಮತ್ತು ಕ್ರಿಶ್ಚಿಯನ್ ಒಬುಮ್ಸೆಲಿ ನಡುವಿನ ಸಂಬಂಧ ಅತ್ಯಂತ ಸಂಘರ್ಷದಿಂದ ಕೂಡಿತ್ತು. ಒಬುಮ್ಸೆಲಿ ಮನೆಯಲ್ಲಿ ಹಿಂಸಾಚಾರಕ್ಕೆ ಒಳಗಾಗುತ್ತಿದ್ದರು. ಎಂದಿದೆ.
ಇನ್ನು ಸ್ಟೇಟ್ ಅಟಾರ್ನಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕೋರ್ಟ್ನಿ ಒಬುಮ್ಸೆಲಿಯ ಸಾವಿಗೆ ಸಂಪೂರ್ಣ ಹೊಣೆಗಾರಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಶ್ಚಿಯನ್ ಒಬುಮ್ಸೆಲಿ ಕುಟುಂಬದ ಜೊತೆಗೆ ಸಂಪೂರ್ಣ ಸಮಾಲೋಚನೆ ನಡೆಸಿ, ಅವರ ಅನುಮೋದನೆಯೊಂದಿಗೆ ಅಂತಿಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಪ್‌ಟಾಪ್ ಪ್ರಕರಣವೂ ಭಾರಿ ಚರ್ಚೆಗೆ ಕಾರಣವಾಗಿತ್ತು
ಕೋರ್ಟ್ನಿ ಕ್ಲೆನ್ನಿ ಪ್ರಕರಣ ಕೇವಲ ಕೊಲೆ ಆರೋಪಕ್ಕೆ ಸೀಮಿತವಾಗಿರಲಿಲ್ಲ. ಒಬುಮ್ಸೆಲಿಯ ಲ್ಯಾಪ್‌ಟಾಪ್‌ಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪವೂ ಕೋರ್ಟ್ನಿ ಮತ್ತು ಆಕೆಯ ಪೋಷಕರ ವಿರುದ್ಧ ಕೇಳಿಬಂದಿತ್ತು.
ಆದರೆ ನಂತರ ಈ ಪ್ರಕರಣದಲ್ಲಿ ಮಹತ್ವದ ಕಾನೂನು ತಿರುವು ಎದುರಾಯಿತು. ವಕೀಲ-ಗ್ರಾಹಕ ಗೌಪ್ಯತೆಗೆ ಒಳಪಟ್ಟ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ಸರಿಯಾಗಿ ನಿರ್ವಹಿಸಿಲ್ಲ ಎಂಬ ವಿಚಾರ ನ್ಯಾಯಾಲಯದ ಮುಂದೆ ಬಂದಿತ್ತು. ಇದರ ಪರಿಣಾಮವಾಗಿ ಕೋರ್ಟ್ನಿ ಹಾಗೂ ಆಕೆಯ ಪೋಷಕರ ವಿರುದ್ಧದ ಕಂಪ್ಯೂಟರ್ ಸಂಬಂಧಿತ ಆರೋಪಗಳನ್ನು ಕೈಬಿಡಲಾಯಿತು.
ನಂತರ ಕೋರ್ಟ್ನಿ ಪರ ವಕೀಲರು ಮಿಯಾಮಿ-ಡೇಡ್ ಸ್ಟೇಟ್ ಅಟಾರ್ನಿ ಕಚೇರಿಯನ್ನೇ ಕೊಲೆ ಪ್ರಕರಣದಿಂದ ತೆಗೆದುಹಾಕುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಆದರೆ ಈ ಮನವಿಯನ್ನು ಪ್ರಾಸಿಕ್ಯೂಷನ್ ವಿರೋಧಿಸಿತ್ತು.
ಯಾರು ಈ ಕೋರ್ಟ್ನಿ ಕ್ಲೆನ್ನಿ?
ಕೋರ್ಟ್ನಿ ಕ್ಲೆನ್ನಿ ಸಾಮಾಜಿಕ ಜಾಲತಾಣಗಳಲ್ಲಿ Courtney Tailor ಎಂಬ ಹೆಸರಿನಿಂದಲೂ ಪ್ರಸಿದ್ಧರಾಗಿದ್ದರು. ಫಿಟ್ನೆಸ್ ಮಾಡೆಲ್ ಹಾಗೂ ಓನ್ಲಿ ಫ್ಯಾನ್ಸ್ ( Only Fans) ಕ್ರಿಯೇಟರ್ ಆಗಿದ್ದ ಅವರಿಗೆ ಬಂಧನಕ್ಕೂ ಮುನ್ನ ಇನ್‌ಸ್ಟಾಗ್ರಾಂನಲ್ಲಿ ( Instagram) ನಲ್ಲಿ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು.
ಆದರೆ 2022ರಲ್ಲಿ ಬಾಯ್‌ಫ್ರೆಂಡ್ ಕ್ರಿಶ್ಚಿಯನ್ ಒಬುಮ್ಸೆಲಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಬಳಿಕ ಕೋರ್ಟ್ನಿ ಕ್ಲೆನ್ನಿ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ನಾಲ್ಕು ವರ್ಷಗಳಿಗೂ ಅಧಿಕ ಕಾಲ ಜೈಲಿನಲ್ಲಿದ್ದ ಕೋರ್ಟ್ನಿ ಇದೀಗ 6 ವರ್ಷಗಳ ಶಿಕ್ಷೆ ಪಡೆದಿದ್ದಾರೆ. ಈಗಾಗಲೇ ಜೈಲಿನಲ್ಲಿ ಕಳೆದ ಅವಧಿಗೆ ಶಿಕ್ಷೆಯಲ್ಲಿ ವಿನಾಯಿತಿ ಆಕೆಯ ವಕೀಲರ ಅಂದಾಜಿನ ಪ್ರಕಾರ ಇನ್ನೂ ಸುಮಾರು 18ರಿಂದ 20 ತಿಂಗಳುಗಳಷ್ಟು ಕಾಲ ಜೈಲಿನಲ್ಲಿ ಇರಬೇಕಾಗಬಹುದು ಎಂದಿದ್ದಾರೆ.
Topics

