Kannada News Next

religion

ನರಸಿಂಹನ ಗುಹಾಂತರ ದೇವಾಲಯ- ದೇವರನ್ನು ಕಾಣೋದಕ್ಕೂ ಬೇಕು ಪರಿಶ್ರಮ

ಗುಹೆಯ ಒಳಕ್ಕೆ ಹೋದಂತೆಲ್ಲಾ ಎದೆ ಮಟ್ಟಕ್ಕೆ ಹರಿಯುವ ನೀರು ಒಮ್ಮೆ ಮೈ ಜುಂ ಅನ್ನುವಂತೆ ಮಾಡುತ್ತೆ ಹೀಗೆ ಸಾಗುತ್ತಾ ಹೋದ್ರೆ ನಮಗೆ ನರಸಿಂಹ ಸ್ವಾಮಿ ದೇವರ ದರ್ಶನವಾಗುತ್ತದೆ

By ವಂದನಾ ಕೊಮ್ಮುಂಜೆ | Vandana kommunje
image_c044330c (1) narasimha

ನಮ್ಮ ರಾಜ್ಯ ಹಲವು ದೇವಾಲಯಗಳ ಬೀಡು . ಇಲ್ಲಿ ಒಂದೊಂದು ದೇವಾಲಯ ಒಂದೊಂದು ಕಥೆ ಹೇಳುತ್ತೆ . ಪ್ರತಿಯೊಂದು ದೇವಾಲಯಕ್ಕೂ ಅದರದೇ ಆದ ಸೊಬಗು ಇದೆ . ಆದ್ರೆ ಪ್ರತಿಯೊಂದು ಒಂದರಿಂದ ಒಂದು ಭಿನ್ನ . ಇದೇ ರೀತಿಯ ದೇವಾಲಯ ಗಡಿಜಿಲ್ಲೆ ಬೀದರ್ ನ ಝರಣಿಯಲ್ಲಿದೆ .

ಇಲ್ಲಿರೋ ನರಸಿಂಹ ಸ್ವಾಮಿಯ ದೇವಾಲಯವನ್ನು ನೋಡೋದೆ ಚೆನ್ನ . ಈ ದೇವಾಲಯ ಉಳಿದ ನರಸಿಂಹ ದೇವಾಲಯಕ್ಕಿಂತ ಬಿನ್ನ ಏಕೆಂದರೆ ಇಲ್ಲಿ ದೇವರ ದರ್ಶನ ಮಾಡ ಬೇಕಾದ್ರೆ ಗುಹೆಯೊಳಕ್ಕೆ ಹೋಗಬೇಕಾಗುತ್ತೆ , ಸುತ್ತಲು ಕತ್ತಲು ಗುಹೆಯ ಒಳಕ್ಕೆ ಹೋದಂತೆಲ್ಲಾ ಎದೆ ಮಟ್ಟಕ್ಕೆ ಹರಿಯುವ ನೀರು ಒಮ್ಮೆ ಮೈ ಜುಂ ಅನ್ನುವಂತೆ ಮಾಡುತ್ತೆ ಹೀಗೆ ಸಾಗುತ್ತಾ ಹೋದ್ರೆ ನಮಗೆ ನರಸಿಂಹ ಸ್ವಾಮಿ ದೇವರ ದರ್ಶನವಾಗುತ್ತದೆ

ನೀರಾಗಿ ಹರಿದ ರಾಕ್ಷಸ

ಇಲ್ಲಿ ನರಸಿಂಹ ದೇವರ ಜೊತೆಯಲ್ಲೇ ಶಿವನೂ ನೆಲೆ ನಿಂತಿದ್ದಾನೆ . ಇದಕ್ಕೆ ಕಾರಣ ಇಲ್ಲಿನ ಸ್ಥಳ ಪುರಾಣ ನರಸಿಂಹ ಸ್ವಾಮಿಯು ಹಿರಣ್ಯ ಕಶುಪುವನ್ನು ಕೊಂದ ವೇಳೆಯಲ್ಲೇ ಈ ಗುಹೆಯಲ್ಲಿ ಝರ ಅನ್ನೋ ರಾಕ್ಷಸ ವಾಸ ಮಾಡುತ್ತಿದ್ದ. ಸಾಮಾನ್ಯ ಜನರಿಗೆ ಉಪಟಳವನ್ನು ನೀಡುತ್ತಿದ್ದ ಈ ರಾಕ್ಷಸ ಅಪ್ರತಿಮ ಶಿವ ಭಕ್ತನಾಗಿದ್ದ . ಗುಹೆಯಲ್ಲೇ ಶಿವ ಲಿಂಗ ಸ್ಥಾಪಿಸಿ ಪೂಜೆ ಮಾಡುತ್ತಿದ್ದ. ಇದೇ ಶಿವಲಿಂಗ ಈಗಲೂ ಈ ಗುಹೆಯಲ್ಲಿದೆ. ಇನ್ನು ರಾಕ್ಷಸನ ಉಪಟಳದಿಂದ ಬೇಸತ್ತ ಜನರು ನರಸಿಂಹ ದೇವರ ಬಳಿ ಸಂಹಾರಕ್ಕಾಗಿ ಕೇಳಿದರು. ಆಗ ಬಂದ ನರಸಿಂಹ ಸ್ವಾಮಿ ಝರ ರಾಕ್ಷಸನನ್ನು ಸಂಹರಿಸಿದರಂತೆ . ಆದರೆ ರಾಕ್ಷಸ ಸಾಯುವ ಮುನ್ನ ದೇವರು ಈ ಗುಹೆಯಲ್ಲೇ ಉಳಿಯಬೇಕು ಹಾಗು ತನ್ನ ಹೆಸರಲ್ಲೇ ಈ ಜಾಗವನ್ನು ಕರೆಯಬೇಕು ಎಂದು ಕೇಳಿದನಂತೆ . ಜೊತೆಗೆ ನರಸಿಂಹ ದೇವರ ಪಾದದಿಂದ ಧಾರೆಯಾಗಿ ಹರಿದ ಎಂಬ ನಂಬಿಕೆ ಇದೆ.

ಚರ್ಮರೋಗ ದೂರ - ಸಂತಾನ ಭಾಗ್ಯ

ಹೀಗಾಗಿ ಈ ಸ್ಥಳಕ್ಕೆ ಝರಣಿ ಎನ್ನೋ ಹೆಸರು ಇಡಲಾಗಿದೆ. ಇದು ಉಗುರು ಬೆಚ್ಚಗಿನ ನೀರಾಗಿದ್ದು ಎಂದಿಗೂ ಎದೆಯ ಮಟ್ಟವನ್ನು ದಾಟಿಲ್ಲ. ಇನ್ನು ಈ ನೀರಿನಲ್ಲಿ ಸಲ್ಫೇಟ್ ಅಂಶ ಇರೋದ್ರಿಂದ ಚರ್ಮ ರೋಗ ಗುಣವಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಇಲ್ಲಿಗೆ ದಿನಾಲು ಸಾವಿರಾರು ಭಕ್ತರು ಬಂದು ದರ್ಶನ ಮಾಡುತ್ತಾರೆ. ಹೆಚ್ಚಾಗಿ ಸಂತಾನಕ್ಕಾಗಿ ಇಲ್ಲಿ ಹರಕೆ ಹೇಳಿಕೊಳ್ಳಲಾಗುತ್ತೆ. ಮಂಗಳವಾರ, ಶನಿವಾರ ಭಕ್ತರ ದರ್ಶನ ಇಲ್ಲಿ ಜಾಸ್ತಿ ಇರುತ್ತೆ . ಗರ್ಭಿಣಿ ಸ್ತ್ರೀಯರು ಹೆರಿಗೆಗೆ ಮುನ್ನ ಬಂದು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ನಂತರ ತಮ್ಮ ಮಕ್ಕಳ ಚೌಲ ಮಾಡಿ ಹರಕೆ ತೀರಿಸಲಾಗುತ್ತೆ. ನರಸಿಂಹ ಜಯಂತಿಯ 9 ದಿನ ಇಲ್ಲಿ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಸಲಾಗುತ್ತೆ.

ಈ ದೇವಾಲಕ್ಕೆ ಬರುವಾಗ ನೀವು ಒಂದು ಜೊತೆ ಬಟ್ಟೆ ಹೆಚ್ಚಾಗಿಯೇ ತರಬೇಕಾಗುತ್ತೆ . ಯಾಕಂದ್ರೆ 365 ದಿನವೂ ನೀರಿನ ಮಟ್ಟ ಕಡಿಮೆಯಾಗಲ್ಲ. ಇನ್ನು ದೇವಾಲಯದ ಒಳಗೆ ಕೇವಲ 8 ರಿಂದ 9 ಜನರಿಗೆ ಮಾತ್ರ ಇರೋಕೆ ಜಾಗಶವಿದೆ. ಉಳಿದ ಭಕ್ತರು ನೀರಿನಲ್ಲಿ ನಿಂತು ಕಾದು ದರ್ಶನ ಮಾಡಬೇಕು . ಸಾಮಾನ್ಯವಾಗಿ ಬೆಳಗ್ಗೆ 7ರಿಂದ 5ಗಂಟೆವರಗೆ ದೇವಾಲಯ ತೆರೆದಿರುತ್ತೆ .ಈ ದೇವಾಲಯ ಬೀದರ್ ನಿಂದ 4 ಕಿಲೋ ಮೀಟರ್ ದೂರವಿದ್ದು ನಗರ ಸಾರಿಗೆ ಮೂಲಕವೂ ಸ್ಥಳಕ್ಕೆ ತಲುಪ ಬಹುದು .