ಲೇಖನ : ಹರಿಕೃಷ್ಣ ಹೊಳ್ಳ , ಬ್ರಹ್ಮಾವರ.
“ಪಿತೃ” ಅಂದರೆ ತಂದೆ ಎಂಬ ಅರ್ಥವಾದರೂ ಇಲ್ಲಿ ಪಿತೃ ಅಂದರೆ ತೀರಿಕೊಂಡ ನಮ್ಮ ಪೂರ್ವಜರು ಎಂದರ್ಥ. ಇಹಲೋಕವನ್ನು ತ್ಯೆಜಿಸಿದ ತಂದೆ, ತಾಯಿ, ಅಜ್ಜ , ಅಜ್ಜಿ , ಮುತ್ತಜ್ಜ , ಮುತ್ತಜ್ಜಿ ಕೂಡ ಪಿತೃಗಳೇ ಆಗಿರುತ್ತಾರೆ. ಮೃತರಾದಾಗ ಅವರ ಉತ್ತರ ಕ್ರಿಯೆಗಳನ್ನು ಪೂರೈಸಿ ಪಿಂಡದ ಮೂಲಕ ಮೃತರ ಆತ್ಮಗಳನ್ನು ಪಿತೃಲೋಕಕ್ಕೆ ಕಳುಹಿಸಿಕೊಟ್ಟಿರುತ್ತೇವೆ.
ಪಿತೃಲೋಕ ಎಂಬುದು ಭೂಲೋಕ ಮತ್ತು ಭುವರ್ಲೋಕಗಳ ನಡುವೆ (ಅಂದಾಜು ಚಂದ್ರನ ಸಮೀಪ) ಇರುವ ಒಂದು ಲೋಕವಾಗಿರುತ್ತದೆ. ತೀರಿ ಹೋದ ಮೂರು ತಲೆಮಾರಿನ ನಮ್ಮ ಹಿರಿಯರು ಈ ಪಿತೃಲೋಕದಲ್ಲಿರುತ್ತಾರೆ. ಅದಕ್ಕೂ ಹಿಂದಿನವರು ಅವರವರ ಕರ್ಮಫಲಗಳಿಗೆ ಅನುಸಾರವಾಗಿ ಮೋಕ್ಷವನ್ನೋ , ಸ್ವರ್ಗಲೋಕವನ್ನೋ , ನರಕವನ್ನೋ ಅಥವಾ ಪುನರ್ಜನ್ಮನ್ನೋ ಹೊಂದಿರುತ್ತಾರೆ.
ಪಿತೃಗಳು ಮತ್ತು ಪಿತೃದೇವತೆಗಳು ಬೇರೆ ಬೇರೆ. ಪಿತೃಲೋಕದಲ್ಲಿ ವಸು , ರುದ್ರ ಮತ್ತು ಆದಿತ್ಯರು ಪ್ರಮುಖ ಪಿತೃದೇವತೆಗಳಾಗಿರುತ್ತಾರೆ. ವಸುವು 1ನೇ ತಲೆಮಾರಿನ ಅಪ್ಪ-ಅಮ್ಮಂದಿರ ಅಧಿಪತಿ ಆದರೆ , ರುದ್ರ ನಮ್ಮ 2ನೇ ತಲೆಮಾರಿನ ಅಜ್ಜ-ಅಜ್ಜಿಯರ ಅಧಿಪತಿ. ಇನ್ನು ಆದಿತ್ಯನು ನಮ್ಮ 3ನೇ ತಲೆಮಾರಿನ ಮುತ್ತಜ್ಜ-ಮುತ್ತಜ್ಜಿಯರ ಅಧಿಪತಿಯಾಗಿದ್ದಾನೆ ಎಂದು ನಂಬಲಾಗುತ್ತಿದೆ.
ಬಾಧ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಪಿತೃಲೋಕದ ದ್ವಾರವನ್ನು ಪಿತೃ ದೇವತೆಗಳು ತೆರೆದು, 3 ತಲೆಮಾರಿನ ಪಿತೃಗಳು ಭೂಲೋಕಕ್ಕೆ ತೆರಳಿ ಅವರ ಸಂತತಿಯವರನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸುತ್ತಾರೆ. ಹೀಗೆ 3 ತಲೆಮಾರಿನ ಪಿತೃಗಳು ಮನೆಗೆ ಮರಳುವ ಪಕ್ಷವನ್ನೇ ಪಿತೃಪಕ್ಷ ಎನ್ನುತ್ತಾರೆ.
ಅಷ್ಟೇ ಅಲ್ಲಾ ಬಾಧ್ರಪದ ಮಾಸದ ಕೃಷ್ಣಪಕ್ಷದಲ್ಲಿ ದೇವತೆಗಳು ಹಾಗೂ ರಾಕ್ಷಸರ ನಡುವೆ ಭೀಕರ ಯುದ್ದವೊಂದು ನಡೆಯಿತು. ರಾಕ್ಷಸರು ಹಲವು ದೇವತೆಗಳನ್ನು ಮತ್ತು ಋಷಿಗಳನ್ನು ಕೊಂದು ಮಹಾ ವಿನಾಶವನ್ನೇ ಉಂಟು ಮಾಡಿದ್ದರು. ಹೀಗೆ ಮಹಾವಿನಾಶ ಉಂಟಾದ ಪಕ್ಷವನ್ನೇ ಮಹಾಲಯ ಪಕ್ಷ ಎಂದೂ ಕರೆಯಲಾಗುತ್ತದೆ.
ಪಿತೃಗಳು ಪಿತೃಪಕ್ಷದಲ್ಲಿಭೂಮಿಗೆ ಮರಳಿ ತಮ್ಮ ವಂಶಜರ ಶ್ರಾದ್ಧ ಕರ್ಮಗಳ ಪಿಂಡಗಳನ್ನು ಸ್ವೀಕರಿಸುತ್ತಾರೆ. ಪಿಂಡಗಳನ್ನು ತಿಂದು ತೃಪ್ತರಾದ ಪಿತೃಗಳು ಅವರನ್ನು ಯಾವ ರೀತಿ ಹರಸುತ್ತಾರೆ ? ಎಂಬುದನ್ನು ಈ ಶ್ಲೋಕವು ತಿಳಿಸುತ್ತದೆ -
ಪಿತಾ ದದಾತಿ ಸತ್ಪುತ್ರಾನ್ ಗೋಧನಾನಿ ಪಿತಾಮಹ: |
ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: ||
ದದ್ಯಾದ್ವಿಪುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |
ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||
ತಂದೆಯು ಉತ್ತಮ ಸಂತಾನವನ್ನೂ , ಅಜ್ಜನು ಗೋಸಂಪತ್ತನ್ನೂ , ಮುತ್ತಜ್ಜನು ಆಹಾರ ಧಾನ್ಯ ಮತ್ತು ಇತರ ಸಂಪತ್ತುಗಳನ್ನು ನೀಡಿ , ಪುತ್ರನ ಇಷ್ಟಾರ್ಥಗಳನ್ನು ನೆರವೇರಿಸಿ ಹರಸುತ್ತಾರೆ ಎಂಬುದು ಈ ಶ್ಲೋಕದ ತಾತ್ಪರ್ಯವಾಗಿದೆ.
ತಂದೆಯನ್ನು ಕಳೆದುಕೊಂಡವರು ಪ್ರತೀ ವರ್ಷವೂ ಶ್ರಾದ್ಧ ಕಾರ್ಯಗಳನ್ನು ಮಾಡಿದರೂ ಕೂಡ ಪಿತೃಪಕ್ಷದಲ್ಲಿ ಪುನಹ , ತಮ್ಮ ಪಿತೃಗಳಿಗೆ ಶ್ರಾದ್ದದ ಮೂಲಕ ಪಿಂಡ ಪ್ರಧಾನ ಮಾಡಬೇಕು. ಒಂದೊಮ್ಮೆ ಅದು ಸಾಧ್ಯ ಆಗದೇ ಇದ್ರೆ ಕನಿಷ್ಠ ಒಂದು ದಿನವಾದರೂ ಪಿಂಡ ಪ್ರಧಾನ ಮಾಡಲೇಬೇಕು ಎಂದು ಗ್ರಂಥಗಳಲ್ಲಿ ತಿಳಿಸಿವೆ. ಭೂಮಿಯಲ್ಲಿ ಒಂದು ದಿನ ಅಂದ್ರೆ 24 ಗಂಟೆ ಆದರೆ ಪಿತೃಲೋಕದಲ್ಲಿ 15 ದಿನ ಹಗಲು, 15 ದಿನದ ರಾತ್ರಿಯನ್ನು ಒಂದು ದಿನ ಎಂದು ಪರಿಗಣಿಸಲಾಗುತ್ತದೆ.
ಕೃಷ್ಣಪಕ್ಷದ ಅಷ್ಟಮಿಯಿಂದ ಹಿಡಿದು ಶುಕ್ಲ ಪಕ್ಷದ ಅಷ್ಟಮಿಯ ವರೆಗೆ ಪಿತೃಲೋಕದಲ್ಲಿ ಹಗಲಾಗಿದ್ದು , ಶುಕ್ಲಪಕ್ಷದ ಅಷ್ಟಮಿಯಿಂದ ಹಿಡಿದು ಕೃಷ್ಣಪಕ್ಷದ ಅಷ್ಟಮಿಯವರೆಗೆ ಅಲ್ಲಿ ರಾತ್ರಿಯಂತೆ. ಅಮವಾಸ್ಯೆಯ ದಿನವು ಅಲ್ಲಿ ನಡು ಮಧ್ಯಾಹ್ನದ ಊಟದ ಸಮಯ, ಹೀಗಾಗಿ ಮಹಾಲಯ ಅಮವಾಸ್ಯೆಯ ದಿನದಂದೇ ಪಿತೃಗಳಿಗೆ ಶ್ರಾದ್ದ ಮಾಡುವುದು ಹೆಚ್ಚು ಸೂಕ್ತ.
ಕಾಕಬಲಿ
ಪಿತೃಗಳ ಆತ್ಮವು ಪಿತೃಪಕ್ಷದಲ್ಲಿ ಮನೆಗೆ ಯಾವುದೇ ರೂಪದಲ್ಲಿಯೂ ಬರಬಹುದು. ಇದೇ ಕಾರಣದಿಂದಲೇ ಪಿತೃಪಕ್ಷದಲ್ಲಿ ಮನೆಗೆ ಬರುವ ಮಾವನವರು, ಪಶು- ಪಕ್ಷಿಗಳನ್ನು ಗೌರವಿಸಿ ಆಹಾರ ನೀಡಬೇಕು ಅನ್ನೋದನ್ನು ಶಾಸ್ತ್ರ ತಿಳಿಸಿದೆ. ರಾವಣನ ಕಾಲದಲ್ಲಿ ಮರುತ್ತ ರಾಜ ಒಂದು ಯಜ್ಞವನ್ನು ನಡೆಸುತ್ತಾನೆ. ರಾವಣನಿಗೆ ಹೆದರಿದ ದೇವತೆಗಳು ಒಂದೊಂದು ಪ್ರಾಣಿ- ಪಕ್ಷಿಯ ರೂಪವನ್ನು ತಾಳಿ ಯಜ್ಞದಲ್ಲಿ ಪಾಲ್ಗೊಳ್ಳುತ್ತಾರೆ. ಆಗ ಯವ ಕೂಡ ಕಾಗೆಯ ರೂಪವನ್ನು ತಾಳಿದ್ದನಂತೆ.
ಪ್ರಾಣಿ - ಪಕ್ಷಿಗಳ ರೂಪವನ್ನು ತಾಳಿದ ದೇವತೆಗಳು ಪ್ರತೀ ಪ್ರಾಣಿ ಪಕ್ಷಿಗಳಿಗೆ ಒಂದೊಂದು ವರವನ್ನು ನೀಡುತ್ತಾರೆ. ಅಂತೆಯೇ ಯಮ ಭೂಲೋಕದಲ್ಲಿ ಮಾನವರು ಮಾಡುವ ಶ್ರಾದ್ದದ ಪಿಂಡಗಳನ್ನು ಕಾಗೆಗಳು ಸ್ವೀಕಾರ ಮಾಡಿದಾಗ ಮಾತ್ರವೇ ನನ್ನ ಲೋಕದಲ್ಲಿ ಇರುವ ಪಿತೃಗಳಿಗೆ ಅದರಿಂದ ತೃಪ್ತಿ ಉಂಟಾಗಲಿ ಎಂಬ ವರವನ್ನು ನೀಡುತ್ತಾನೆ. ಆ ಕಾರಣದಿಂದಾಗಿ ಈಗಲೂ ಕೂಡ ಶ್ರಾದ್ದ ಮಾಡಿದಾಗ ಕಾಗೆಗಳಿಗೆ ಮೊದಲು ಕಾಕಬಲಿ ಅಂದ್ರೆ ಅನ್ನವನ್ನು ಅರ್ಪಿಸುತ್ತಾರೆ.