Solar Eclipse 2026: ಆಗಸ್ಟ್ 12ರ ಸೂರ್ಯಗ್ರಹಣ; ಜ್ಯೋತಿಷ್ಯ ಪ್ರಕಾರ ಈ ರಾಶಿಗಳಿಗೆ ಹೆಚ್ಚು ಪ್ರಭಾವ?
Solar Eclipse 2026: ಆಗಸ್ಟ್ 12ರ ಸೂರ್ಯಗ್ರಹಣ; ಜ್ಯೋತಿಷ್ಯ ಪ್ರಕಾರ ಈ ರಾಶಿಗಳಿಗೆ ಹೆಚ್ಚು ಪ್ರಭಾವ?
By Arun Gundmi | ಅರುಣ್ ಗುಂಡ್ಮಿ · Editor-in-Chief
3 min read
ಬೆಂಗಳೂರು: ಇಂದು (ಆಗಸ್ಟ್ 12, 2026ರಂದು) ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣ ಸದ್ಯ ಖಗೋಳಾಸಕ್ತರ ಗಮನ ಸೆಳೆದಿದೆ. ಈ ಬಾರಿ ಸಂಭವಿಸುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದರೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯಗ್ರಹಣಕ್ಕೆ ವಿಶೇಷವಾದ ಮಹತ್ವ ನೀಡಲಾಗಿದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಗ್ರಹಣದ ಸಮಯದಲ್ಲಿ ಗ್ರಹಗಳ ಸ್ಥಾನಮಾನವನ್ನು ಆದರಿಸಿ ಯಾವ ರಾಶಿಗಳ ಮೇಲೆ ಸೂರ್ಯಗ್ರಹಣದ ಪ್ರಭಾವ ಬೀರಲಿದೆ ಅನ್ನೋ ಮಾಹಿತಿ ಇಲ್ಲಿದೆ.
ಸೂರ್ಯಗ್ರಹಣ : ಯಾವ ರಾಶಿಗಳಿಗೆ ಹೆಚ್ಚು ಪ್ರಭಾವ ?
ಜ್ಯೋತಿಷ್ಯದಲ್ಲಿ ಸೂರ್ಯನಿಗೆ ಸಂಬಂಧಿಸಿದ ಗ್ರಹಣ ಆಗಿರುವ ಕಾರಣದಿಂದ, ಸೂರ್ಯನ ಸ್ಥಾನ ಮತ್ತು ಗ್ರಹಣ ಸಂಭವಿಸುವ ರಾಶಿ ನಕ್ಷತ್ರವನ್ನು ಆಧರಿಸಿ ಫಲಿತಾಂಶವನ್ನು ವಿಶ್ಲೇಷಿಸಲಾಗುತ್ತದೆ. ಹಾಗಾದ್ರೆ ಇಂದಿನ ಸೂರ್ಯಗ್ರಹಣ ಯಾವ ರಾಶಿಯ ಮೇಲೆ ಪ್ರಭಾವ ಬೀರುತ್ತದೆ.
1. ಸಿಂಹ ರಾಶಿ
ಸೂರ್ಯನು ಸಿಂಹ ರಾಶಿಯ ಅಧಿಪತಿ ಆಗಿರುವುದರಿಂದ ಸೂರ್ಯಗ್ರಹಣದ ಸಂದರ್ಭದಲ್ಲಿ ಸಿಂಹ ರಾಶಿ ಅವರ ಬಗ್ಗೆ ವಿಶೇಷವಾಗಿ ಚರ್ಚಿಸಲಾಗುತ್ತದೆ. ಜ್ಯೋತಿಷ್ಯ ಪ್ರಕಾರ, ವೈಯಕ್ತಿಕ ನಿರ್ಧಾರಗಳು, ಆತ್ಮವಿಶ್ವಾಸ ಮತ್ತು ವೃತ್ತಿಜೀವನದ ವಿಚಾರಗಳಲ್ಲಿ ಹೆಚ್ಚು ಗಮನ ಅಗತ್ಯವಾಗಬಹುದು ಎಂದು ಹೇಳಲಾಗುತ್ತದೆ.
ಉದ್ಯೋಗ: ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿದೆ. ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶಗಳು ಎದುರಾಗಲಿದೆ. ಆದರೆ ಮೇಲಧಿಕಾರಿಗಳೊಂದಿಗೆ ಅನಗತ್ಯ ವಾದ-ವಿವಾದಗಳನ್ನು ತಪ್ಪಿಸುವುದು ಒಳಿತು ಎಂದು ಜ್ಯೋತಿಷ್ಯ ನಂಬಿಕೆ ಹೇಳುತ್ತದೆ.
ಹಣಕಾಸು: ದೊಡ್ಡ ಖರ್ಚು ಮತ್ತು ಹೂಡಿಕೆಯ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳದೇ ಇರುವುದು ಉತ್ತಮ. ಆದಾಯಕ್ಕಿಂತ ಖರ್ಚು ಅಧಿಕ ಆಗದಂತೆ ನೋಡಿಕೊಳ್ಳುವ ಅವಧಿ ಎಂದು ಪರಿಗಣಿಸಲಾಗುತ್ತದೆ.
ಸಂಬಂಧಗಳು: ಕುಟುಂಬದಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಮಹತ್ವ ಸಿಗಬಹುದು. ಆದರೆ ಹಠ ಅಥವಾ ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎಚ್ಚರಿಕೆ ಇರಲಿ. ಆತುರದ ನಿರ್ಧಾರಗಳ ಬದಲು ಶಾಂತವಾಗಿರಿ.
2. ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೂ ಈ ಅವಧಿಯಲ್ಲಿ ಮನಸ್ಥಿತಿ ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂಬ ಜ್ಯೋತಿಷ್ಯ ಅಭಿಪ್ರಾಯಗಳಿವೆ. ಪ್ರಮುಖ ನಿರ್ಧಾರಗಳನ್ನು ಆತುರವಾಗಿ ತೆಗೆದುಕೊಳ್ಳದಿರುವುದು ಒಳಿತು ಎಂದು ಜ್ಯೋತಿಷ್ಯ ನಂಬಿಕೆ ಹೇಳುತ್ತದೆ.
ಉದ್ಯೋಗ: ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದೆ. ಕೆಲಸ ಬದಲಾವಣೆ ಅಥವಾ ಹೊಸ ಅವಕಾಶಗಳ ಬಗ್ಗೆ ಯೋಚಿಸುತ್ತಿದ್ದರೆ ಸಂಪೂರ್ಣ ಪರಿಶೀಲನೆ ನಡೆಸಿ.
ಹಣಕಾಸು: ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಜ್ಯೋತಿಷ್ಯ ನಂಬಿಕೆ ಹೇಳುತ್ತದೆ. ಬಜೆಟ್ ರೂಪಿಸಿಕೊಂಡು ಖರ್ಚು ಮಾಡುವುದು ಒಳಿತು.
ಕುಟುಂಬ: ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವ ಅಗತ್ಯ ಬರಬಹುದು. ಸಣ್ಣ ವಿಷಯಗಳನ್ನು ದೊಡ್ಡದಾಗಿ ಮಾಡಿಕೊಳ್ಳದಿರುವುದು ಉತ್ತಮ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಸ್ಪಷ್ಟವಾಗಿ ಮುನ್ನೆಡೆಯಿರಿ.
3. ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಹಣಕಾಸು, ಕೆಲಸ ಮತ್ತು ವೈಯಕ್ತಿಕ ಸಂಬಂಧಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯವಾಗಬಹುದು ಎಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗುತ್ತದೆ. ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಪರಿಸ್ಥಿತಿಯನ್ನು ಪರಿಶೀಲಿಸುವುದು ಒಳಿತು ಎನ್ನಲಾಗುತ್ತದೆ.
ಉದ್ಯೋಗ: ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆ, ಹೊಸ ಜವಾಬ್ದಾರಿಗಳು ಎದುರಾಗಲಿದೆ ನಿಮ್ಮ ಕೆಲಸವನ್ನು ದಾಖಲಾತಿಗಳೊಂದಿಗೆ ನಿರ್ವಹಿಸುವುದು ಉತ್ತಮ.
ಹಣಕಾಸು: ಸಾಲ ಮಾಡುವುದು, ದೊಡ್ಡ ಮಟ್ಟದ ಹೂಡಿಕೆ ಅಥವಾ ಹೆಚ್ಚಿನ ಮೊತ್ತದ ಖರೀದಿಗಳ ಬಗ್ಗೆ ಆತುರ ಬೇಡ. ಹಣಕಾಸಿನ ನಿರ್ಧಾರಗಳನ್ನು ಪರಿಶೀಲಿಸಿ ತೆಗೆದುಕೊಳ್ಳುವುದು ಒಳಿತು.
ವೈಯಕ್ತಿಕ ಜೀವನ: ನಿಮ್ಮ ವರ್ತನೆಯನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳದಂತೆ ಮಾತನಾಡಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ, ತಾಳ್ಮೆ ಮುಖ್ಯ
4. ಕುಂಭ ರಾಶಿ
ಕುಂಭ ರಾಶಿ ಅವರ ಜೀವನದಲ್ಲಿ ಕೆಲವು ಬದಲಾವಣೆ ಅಥವಾ ಹೊಸ ಅವಕಾಶಗಳ ಬಗ್ಗೆ ಗಮನಹರಿಸಿ ಎಂದು ಜ್ಯೋತಿಷ್ಯ ವಿಶ್ಲೇಷಣೆಗಳು ಹೇಳುತ್ತವೆ. ಕೆಲಸ ಮತ್ತು ಭವಿಷ್ಯದ ಯೋಜನೆಗಳಲ್ಲಿ ಸ್ಪಷ್ಟತೆ ಕಾಯ್ದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ.
ಉದ್ಯೋಗ: ಹೊಸ ವ್ಯವಹಾರ, ಹೊಸ ಜವಾಬ್ದಾರಿ ಅಥವಾ ಕೆಲಸದ ವಿಧಾನದಲ್ಲಿ ಬದಲಾವಣೆ ಎದುರಾಗಬಹುದು. ನಿಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ಸಿಗಬಹುದು.
ಹಣಕಾಸು: ಆದಾಯದ ಹೊಸ ಮಾರ್ಗಗಳ ಬಗ್ಗೆ ಯೋಚನೆ ಮೂಡಬಹುದು. ಆದರೆ ಯಾವುದೇ ಹೊಸ ಹಣಕಾಸಿನ ಯೋಜನೆಯನ್ನು ಆರಂಭಿಸುವ ಮೊದಲು ಅದರ ಅಪಾಯಗಳನ್ನು ಪರಿಶೀಲಿಸುವುದು ಅಗತ್ಯ.
ಸಂಬಂಧಗಳು: ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಬೆಂಬಲ ಸಿಗಬಹುದು. ಹಳೆಯ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಅವಕಾಶವೂ ಸಿಗಬಹುದು.
5. ಮಕರ ರಾಶಿ
ಮಕರ ರಾಶಿಯವರಿಗೆ ವೃತ್ತಿ ಮತ್ತು ಆರ್ಥಿಕ ವಿಚಾರಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವ ಅವಧಿ ಎಂದು ಕೆಲವು ಜ್ಯೋತಿಷ್ಯ ಪರಂಪರೆಗಳು ಪರಿಗಣಿಸುತ್ತವೆ.
ಉದ್ಯೋಗ: ಕೆಲಸದ ಒತ್ತಡ ಹೆಚ್ಚಾಗಬಹುದು. ಆದರೆ ನಿಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಿದರೆ ಹೊಸ ಜವಾಬ್ದಾರಿ ಅಥವಾ ಬೆಳವಣಿಗೆಯ ಅವಕಾಶ ದೊರೆಯಬಹುದು.
ಹಣಕಾಸು: ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದು ಒಳಿತು. ದೊಡ್ಡ ಮೊತ್ತದ ಹೂಡಿಕೆ ಬಗ್ಗೆ ಪರಿಶೀಲನೆ ನಡೆಸಿ
ಕುಟುಂಬ: ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾಗಬಹುದು.
ಹಾಗಾದರೆ ಉಳಿದ ರಾಶಿಗಳಿಗೆ ಪರಿಣಾಮ ಇಲ್ಲವೇ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ, ವೃಷಭ, ಮಿಥುನ, ಕನ್ಯಾ, ತುಲಾ, ಧನು, ಮೀನ ಸೇರಿದಂತೆ ಎಲ್ಲ ರಾಶಿಗಳ ಮೇಲೂ ಗ್ರಹಣದ ಪ್ರಭಾವವನ್ನು ವೈಯಕ್ತಿಕ ಜಾತಕದ ಆಧಾರದ ಮೇಲೆ ವಿಭಿನ್ನವಾಗಿ ಜ್ಯೋತಿಷಿಗಳು ವಿಶ್ಲೇಷಿಸುತ್ತಾರೆ.
ಕೇವಲ ರಾಶಿಯನ್ನು ಆಧರಿಸಿ ಯಾರೊಬ್ಬರ ಜೀವನದಲ್ಲಿ ನಿಖರವಾಗಿ ಏನು ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಜನ್ಮ ದಿನಾಂಕ, ಸಮಯ ಮತ್ತು ಸ್ಥಳ ಸೇರಿದಂತೆ ವೈಯಕ್ತಿಕ ಜಾತಕವನ್ನು ಪರಿಗಣಿಸಿದ ನಂತರವೇ ಜ್ಯೋತಿಷ್ಯದಲ್ಲಿ ಹೆಚ್ಚಿನ ವಿವರವಾದ ಫಲಿತಾಂಶಗಳನ್ನು ನೀಡಲಾಗುತ್ತದೆ.
ಸೂರ್ಯಗ್ರಹಣದಿಂದ ನಿಜವಾಗಿಯೂ ಏನಾದರೂ ಅಪಾಯವೇ?
ಸೂರ್ಯಗ್ರಹಣವು ಒಂದು ಸಹಜ ಖಗೋಳ ವಿದ್ಯಮಾನ. ಗ್ರಹಣದಿಂದ ರಾಶಿಗಳಿಗೆ ಅನಿವಾರ್ಯವಾಗಿ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.
ಆದ್ದರಿಂದ ಆರೋಗ್ಯ, ಹಣಕಾಸು, ಶಿಕ್ಷಣ ಅಥವಾ ಉದ್ಯೋಗದಂತಹ ಪ್ರಮುಖ ನಿರ್ಧಾರಗಳನ್ನು ಕೇವಲ ಗ್ರಹಣ ಅಥವಾ ರಾಶಿಫಲದ ಆಧಾರದ ಮೇಲೆ ತೆಗೆದುಕೊಳ್ಳುವುದು ಸೂಕ್ತವಲ್ಲ.
ಆಗಸ್ಟ್ 12ರ ಸೂರ್ಯಗ್ರಹಣದ ಕುರಿತು ಖಗೋಳ ವಿಜ್ಞಾನ ಮತ್ತು ಜ್ಯೋತಿಷ್ಯ ಎರಡರಲ್ಲೂ ಆಸಕ್ತಿ ಹೆಚ್ಚಾಗಿದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಸಿಂಹ, ಕರ್ಕಾಟಕ, ವೃಶ್ಚಿಕ, ಕುಂಭ ಮತ್ತು ಮಕರ ರಾಶಿಗಳಿಗೆ ಕೆಲವು ವಿಚಾರಗಳಲ್ಲಿ ಹೆಚ್ಚಿನ ಗಮನ ಅಗತ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇವು ಜ್ಯೋತಿಷ್ಯ ನಂಬಿಕೆಗಳಷ್ಟೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
Topics

