ಶ್ರಾವಣ ಮಾಸ ಬಂತು ಅಂದ್ರೆ ಸಾಕು ಸಾಲು ಸಾಲು ಹಬ್ಬಗಳ ಕಾಲ. ಅದ್ರಲ್ಲೂ ಮಹಿಳೆಯರ ಪಾಲಿಗಂತೂ ಶ್ರೇಷ್ಟವಾದ ಕಾಲ. ಶ್ರಾವಣ ಮಾಸದಲ್ಲಿ ಭಕ್ತ- ಭಾವದಿಂದ ಆಚರಿಸುವ ಹಬ್ಬವೆಂದ್ರೆ ಅದು ವರಮಹಾಲಕ್ಷ್ಮಿ ವ್ರತ' (Varamahalakshmi Vrata).
ಸಂಪತ್ತು, ಆರೋಗ್ಯ ಮತ್ತು ಶ್ರೇಯಸ್ಸನ್ನು ಕರುಣಿಸುವಂತೆ ಬೇಡಿಕೊಳ್ಳುತ್ತಾ ತಾಯಿಯನ್ನು ಆರಾಧಿಸುವ ಶುಭ ದಿನವಿದು. ವಾಸ್ತುಶಾಸ್ತ್ರದ ಪ್ರಕಾರ, ವರಮಹಾಲಕ್ಷ್ಮೀ ವೃತದ ದಿನದಂದು ಕೆಲವು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಧಾನ್ಯ ವೃದ್ದಿಯಾಗುತ್ತದೆ ಎಂಬ ನಂಬಿಕೆಯಿದೆ.
ವರಮಹಾಲಕ್ಷ್ಮೀ ಹಬ್ಬದ ಶುಭ ಮುಹೂರ್ತ ಮತ್ತು ಪೂಜಾ ಸಮಯ
ಪೂಜೆಯನ್ನು ಮಾಡುವ ಸಂದರ್ಭದಲ್ಲಿ ನಿಗದಿತ ಶುಭ ಲಗ್ನದಲ್ಲಿಯೇ ಮಾಡಬೇಕು ಅನ್ನೋ ನಿಯಮವಿದೆ. ಹೀಗೆ ಮಾಡುವುದರಿಂದ ಸಂಪೂರ್ಣ ಫಲ ದೊರೆಯುತ್ತದೆ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದ್ರೆ ವರಮಹಾಲಕ್ಷ್ಮೀ ಹಬ್ಬದ ಮುಹೂರ್ತ, ಪೂಜಾ ಸಮಯದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಳಗಿನ ಮುಹೂರ್ತ: ವರಮಹಾಲಕ್ಷ್ಮಿ ಪೂಜೆ ಬೆಳಗಿನ ಜಾವ (ಬ್ರಾಹ್ಮೀ ಮುಹೂರ್ತ) ಅಂದ್ರೆ ಮುಂಜಾನೆ 4:30 ರಿಂದ 6:00 ಗಂಟೆಯೊಳಗೆ ಮಾಡುವುದು ಅತ್ಯಂತ ಶ್ರೇಷ್ಠ.
ಒಂದೊಮ್ಮೆ ಬೆಳಗಿನ ಸಮಯದಲ್ಲಿ ಮಾಡಲು ಸಾಧ್ಯವಾಗದೇ ಇರುವವರು ವೃಷಭ ಲಗ್ನದಲ್ಲಿ ಅಂದ್ರೆ (ಬೆಳಗ್ಗೆ 6:00 ರಿಂದ 8:00 ಗಂಟೆಯವರೆಗೆ) ಪೂಜೆ ಸಲ್ಲಿಸಬಹುದು.
ಸಂಜೆಯ ಮುಹೂರ್ತ: ಬೆಳಗ್ಗೆ ಮಾತ್ರವಲ್ಲ, ಸಂಜೆಯ ವೇಳೆಯಲ್ಲಿಯೂ ಕೂಡ ವರಮಹಾಲಕ್ಷ್ಮೀಯ ಪೂಜೆಯನ್ನು ಮಾಡಲಾಗುತ್ತದೆ. ಗೋಧೂಳಿ ಲಗ್ನದಲ್ಲಿ (ಸಂಜೆ 6:00 ರಿಂದ 7:30ರ ಒಳಗೆ) ಲಕ್ಷ್ಮಿಗೆ ದೀಪ ಬೆಳಗಿ, ಆರತಿ ಮಾಡುವುದು ಕೂಡ ಅಷ್ಟೇ ಶ್ರೇಯಸ್ಕರ ಅನ್ನೋ ನಂಬಿಕೆಯಿದೆ.
ವಾಸ್ತುಶಾಸ್ತ್ರದ ಪ್ರಕಾರ ಯಾವ ದಿಕ್ಕಿಗೆ ಕಳಸ ಸ್ಥಾಪನೆ ಮಾಡಬೇಕು ?
ವರಮಹಾಲಕ್ಷ್ಮೀ ವೃತದಲ್ಲಿನ ಲಕ್ಷ್ಮೀ ಪೂಜೆಯ(Lakshmi pooja) ಪ್ರಮುಖ ಘಟ್ಟವೇ 'ಕಳಶ ಸ್ಥಾಪನೆ'. ವಾಸ್ತು ಶಾಸ್ತ್ರದ (Vastu tips in Kannada) ಪ್ರಕಾರ, ದಿಕ್ಕುಗಳ ಆಯ್ಕೆ ನಿಮಗೆ ಪೂಜೆಯ ಫಲವನ್ನು ನಿರ್ಧಾರ ಮಾಡುತ್ತದೆ. ಹಾಗಾದ್ರೆ ಪೂಜೆಗೆ ಯಾವ ಧಿಕ್ಕು ಸೂಕ್ತ ಅನ್ನೋದು ಡಿಟೇಲ್ಸ್ ಇಲ್ಲಿದೆ ನೋಡಿ.
ಈಶಾನ್ಯ ಮೂಲೆ (North-East): ಪೂಜೆಯ ದಿನಂದು ಕಳಶವನ್ನು ಸಾಮಾನ್ಯವಾಗಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸುವುದು ಅತ್ಯಂತ ಶುಭದಾಯಕ. ಈ ದಿಕ್ಕನ್ನು ದೇವರ ಸ್ಥಾನವೆಂದೇ ಪರಿಗಣಿಸಲಾಗುತ್ತದೆ.
ಪೂಜೆ ಮಾಡುವಾಗ ನಿಮ್ಮ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿರಬೇಕು. ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕಳಶವನ್ನು ಕೂರಿಸಬೇಡಿ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ಆಕರ್ಷಿಸುವ ಸಾಧ್ಯತೆಯಿದೆ.
ಅದೃಷ್ಟ ತರುವ ಈ ವಸ್ತುಗಳು ಪೂಜೆಯಲ್ಲಿ ಇರಲಿ ಕಡ್ಡಾಯ
ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯವಾಗಿರುವ ಕೆಲವು ವಸ್ತುಗಳನ್ನು ಪೂಜೆಯ ದಿನದಂದು ಮನೆಗೆ ತಂದು ಕಳಶದ ಮುಂದೆ ಇಟ್ಟರೆ ಸಾಕ್ಷಾತ್ ಲಕ್ಷ್ಮೀಯೇ ಒಲಿದು ಮನೆಗೆ ಬರುತ್ತಾಳೆ ಅನ್ನೋ ನಂಬಿಕೆಯಿದೆ. ಹಾಗಾದ್ರೆ ಆ ವಸ್ತುಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.
ಹಳದಿ ಕವಡೆ (Yellow Cowrie Shells) : ಕವಡೆಗಳು ಸಮುದ್ರ ಮಥನದ ಸಮಯದಲ್ಲಿ ಲಕ್ಷ್ಮೀ ದೇವಿಯ ಜೊತೆಯಲ್ಲೇ ಹುಟ್ಟಿ ಬಂದವು ಎಂಬ ಪ್ರತೀತಿಯಿದೆ. ಪೂಜೆಯ ದಿನ 5 ಅಥವಾ 11 ಹಳದಿ ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ದೇವಿಯ ಮುಂದಿಟ್ಟು ಪೂಜಿಸಿ. ನಂತರ ಅವುಗಳನ್ನು ನೀವು ಹಣ ಇಡುವ ಜಾಗದಲ್ಲಿ, ಬೀರುವಿನಲ್ಲಿ ಇಟ್ಟಿದ್ದೇ ಆದ್ರೆ ಹಣದ ಹರಿವು ಹೆಚ್ಚಾಗಲಿದೆಯಂತೆ.
ಅರಿಶಿನದ ಕೊಂಬು (Turmeric Roots): ಅರಿಶಿನವನ್ನು ಅತ್ಯಂತ ಮಂಗಳಕರ ಹಾಗೂ ಶುದ್ಧತೆಯ ಸಂಕೇತ ಎಂದು ಹೇಳಲಾಗುತ್ತಿದೆ. ವರಮಹಾಲಕ್ಷ್ಮಿ ಪೂಜೆಯಲ್ಲಿ ಕನಿಷ್ಠ 5 ಅರಿಶಿನದ ಕೊಂಬುಗಳನ್ನು ದೇವಿಗೆ ಅರ್ಪಿಸಿ. ಇದು ಮಾಂಗಲ್ಯ ಬಲವನ್ನು ಹೆಚ್ಚಿಸುವುದಲ್ಲದೆ, ಮನೆಯಲ್ಲಿರುವ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡುತ್ತದೆ.
ಬೆಳ್ಳಿ ನಾಣ್ಯ ಅಥವಾ ಶ್ರೀಚಕ್ರ: ಲಕ್ಷ್ಮೀ ದೇವಿಯ ಚಿತ್ರವಿರುವ ಬೆಳ್ಳಿ ನಾಣ್ಯ ಅಥವಾ ಶ್ರೀಚಕ್ರವನ್ನು ಕಳಶದ ಬಳಿ ಇಟ್ಟು ಪೂಜಿಸುವುದು ಅತ್ಯಂತ ಶ್ರೇಷ್ಠ. ಬೆಳ್ಳಿಯು ಚಂದ್ರನ ಸಂಕೇತ. ಇದು ಮನೆಯಲ್ಲಿ ಶಾಂತಿ ಮತ್ತು ಸಂಪತ್ತನ್ನು ತರುತ್ತದೆ.
ಕಮಲದ ಹೂವು ಮತ್ತು ಕಲ್ಲುಸಕ್ಕರೆ: ಲಕ್ಷ್ಮಿಗೆ ಕಮಲದ ಹೂವು ಎಂದರೆ ಅಚ್ಚುಮೆಚ್ಚು. ಪೂಜೆಗೆ ಕಡ್ಡಾಯವಾಗಿ ಕಮಲದ ಹೂವನ್ನು ಬಳಸಿ ಮತ್ತು ನೈವೇದ್ಯಕ್ಕೆ ಕಲ್ಲುಸಕ್ಕರೆ ಇಡುವುದನ್ನು ಮರೆಯದಿರಿ.
ವರಮಹಾಲಕ್ಷ್ಮೀಯ ವೃತ ಮಾಡುವ ವೇಳೆಯಲ್ಲಿ ಭಕ್ತಿ ಮತ್ತು ಅತ್ಯಂತ ಶುದ್ದ ಮನಸ್ಸಿನಿಂದ ಆಚರಿಸಬೇಕು.ವೃತಾಚರಣೆಯ ವೇಳೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವ ಮೂಲಕ ಲಕ್ಷ್ಮೀ ಕೃಪಾಕಟಾಕಕ್ಷೆ ಎಲ್ಲರೂ ಪಾತ್ರರಾಗಿ.