Lionel Messi: ಭಾರತಕ್ಕೆ ಹೀಗೆ ಬಂದು ಹಾಗೆ ಹೋದ ಮೆಸ್ಸಿ ಗಳಿಸಿದ್ದು 89 ಕೋಟಿ!

ಕೋಲ್ಕತ್ತಾ: ವಿಶ್ವ ಫುಟ್ಬಾಲ್ ಲೋಕದ ಲಿಯೋನೆಲ್ ಮೆಸ್ಸಿ ಅವರ (Lionel Messi India Tour) ಇತ್ತೀಚಿನ ಭಾರತ ಪ್ರವಾಸವು ಕೇವಲ ಸಂಭ್ರಮಕ್ಕೆ ಮಾತ್ರವಲ್ಲದೆ, ಭಾರಿ ವಿವಾದ ಮತ್ತು ಆರ್ಥಿಕ ಚರ್ಚೆಗಳಿಗೂ ಕಾರಣವಾಗಿದೆ. ಇತ್ತೀಚೆಗೆ ನಡೆದ ತನಿಖೆಯ ವೇಳೆ, ಮೆಸ್ಸಿ ಅವರಿಗೆ ಈ ಪ್ರವಾಸಕ್ಕಾಗಿ ಬರೋಬ್ಬರಿ 89 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಈ ಪ್ರವಾಸದ ಆಯೋಜಕ ಮತ್ತು ಪ್ರಸ್ತುತ ಬಂಧನಕ್ಕೊಳಗಾಗಿರುವ ಶತದ್ರು ದತ್ತಾ ಅವರು ತನಿಖಾ ಸಂಸ್ಥೆಯ (SIT) ಮುಂದೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಮೆಸ್ಸಿ ಅವರ ಪ್ರವಾಸಕ್ಕೆ ಒಟ್ಟು 100 ಕೋಟಿ ರೂಪಾಯಿ ಖರ್ಚಾಗಿದ್ದು, ಅದರಲ್ಲಿ 89 ಕೋಟಿ ರೂಪಾಯಿಗಳನ್ನು ನೇರವಾಗಿ ಮೆಸ್ಸಿ ಅವರಿಗೆ ಸಂಭಾವನೆಯಾಗಿ ನೀಡಲಾಗಿದೆ. ಉಳಿದ 11 ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರಕ್ಕೆ ತೆರಿಗೆಯಾಗಿ ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮೊತ್ತದ ಶೇ. 30ರಷ್ಟನ್ನು ಪ್ರಾಯೋಜಕರಿಂದ ಮತ್ತು ಇನ್ನಷ್ಟು ಮೊತ್ತವನ್ನು ಟಿಕೆಟ್ ಮಾರಾಟದ ಮೂಲಕ ಸಂಗ್ರಹಿಸಲಾಗಿತ್ತು.

ಕೋಲ್ಕತ್ತಾದಲ್ಲಿ ಅಸಮಾಧಾನಗೊಂಡ ಮೆಸ್ಸಿ:

ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದ ವೇಳೆ ಮೆಸ್ಸಿ ಅವರು ತೀವ್ರ ಅಸಮಾಧಾನಗೊಂಡಿದ್ದರು ಎಂದು ವರದಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಜನಜಂಗುಳಿ ಮತ್ತು ಭದ್ರತಾ ಲೋಪ.

ಕಾರ್ಯಕ್ರಮದಲ್ಲಿ ಅವಾಂತರ:

ನೆಚ್ಚಿನ ಆಟಗಾರನನ್ನು ನೋಡಲು ಸಾವಿರಾರು ರೂಪಾಯಿ ನೀಡಿ ಟಿಕೆಟ್ ಖರೀದಿಸಿದ್ದ ಅಭಿಮಾನಿಗಳಿಗೆ ಮೆಸ್ಸಿ ಅವರ ಈ ‘ಮಿಂಚಿನ ಮಾಯ’ ನಿರಾಸೆ ಮೂಡಿಸಿತ್ತು. ಮೈದಾನದಲ್ಲಿ ಗಣ್ಯರು ಮತ್ತು ವಿಐಪಿಗಳ ಹಾವಳಿಯಿಂದಾಗಿ ಸಾಮಾನ್ಯ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಗಳಿಗೆ ಮೆಸ್ಸಿ ಸರಿಯಾಗಿ ಕಾಣಿಸಲೇ ಇಲ್ಲ. ಇದರಿಂದ ಕೋಪಗೊಂಡ ಅಭಿಮಾನಿಗಳು ಸ್ಟೇಡಿಯಂನಲ್ಲಿದ್ದ ಕುರ್ಚಿ ಮತ್ತು ಬಾಟಲಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಅನಾಹುತದ ಕುರಿತು ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಕರ್ನಾಟಕದ ತುಮಕೂರಿನ ಈ ʼವಿಶ್ವವಿದ್ಯಾಲಯʼ ನಕಲಿ! ವಿದ್ಯಾರ್ಥಿಗಳ ಪದವಿ ಅಮಾನ್ಯ

ಭಾರತದಲ್ಲಿ ಫುಟ್ಬಾಲ್ ಬಗ್ಗೆ ಇರುವ ಕ್ರೇಜ್ ಬಳಸಿಕೊಳ್ಳಲು ಹೋದ ಆಯೋಜಕರ ಅವಾಂತರದಿಂದಾಗಿ, ಮೆಸ್ಸಿ ಅಸಮಾಧಾನದೊಂದಿಗೆ ಹಿಂತಿರುಗುವಂತಾಯಿತು. ಇದು ಕೇವಲ ಹಣದ ವ್ಯವಹಾರವಾಗಿ ಉಳಿಯದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕ್ರೀಡಾ ವ್ಯವಸ್ಥೆಯ ಮರ್ಯಾದೆಯ ಪ್ರಶ್ನೆಯಾಗಿಯೂ ಬದಲಾಗಿದೆ.

Exit mobile version