ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮಿತಿಮೀರಿದೆ. ಇಂದಿನಿಂದ ಜೂನ್ 10ರವರೆಗೂ ವರುಣನ ಆರ್ಭಟ ಜಾಸ್ತಿಯೇ ಇರಲಿದ್ದು, ರಾಜ್ಯದ 8 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ರೆಡ್ ಅಲರ್ಟ್ ವ್ಯಾಪ್ತಿಗೆ ಒಳಪಡುವ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಧಾರವಾಡ, ಕೊಡಗು ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಜೂನ್ 8 ರಿಂದ 10 ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮಿತಿಮೀರಿ ಇರಲಿದೆ. ಹೀಗಾಗಿ ಇಂದು ಮತ್ತು ನಾಳೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಇರಲಿದೆ. ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಬೆಳಗಾವಿ, ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಜೂನ್ 10 ರಂದು ಭಾರಿ ಮಳೆ ಆಗುವ ಸಾಧ್ಯತೆ ಇದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ.
ಇದನ್ನೂ ಓದಿ : ವರುಣನ ಅಬ್ಬರ: ಬಿರುಗಾಳಿ ಸಹಿತ ಗುಡುಗು ಮಳೆ ಸಾಧ್ಯತೆ! 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕರಾವಳಿಯ ಪುತ್ತೂರು , ಬೆಳ್ತಂಗಡಿ ಹಾಗೂ ಸುಳ್ಯ ಭಾಗದಲ್ಲಿ ಇಂದು ಮಳೆಯ ತೀವ್ರತೆ ಮಿತಿಮೀರಿ ಇರಲಿದ್ದು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. 115 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, 24X7 ಕಂಟ್ರೋಲ್ ರೂಮ್ ತೆರೆಯಲಾಗಿದೆ. ಪುತ್ತೂರಿನಲ್ಲಿ 30 ಸದಸ್ಯರ ಎನ್ಡಿಆರ್ಎಫ್ (NDRF) ತಂಡ ಬೀಡುಬಿಟ್ಟಿದ್ದು ಯಾವುದೇ ದುರ್ಘಟನೆ ಸಂಭವಿಸದಂತೆ ನಿಗಾ ವಹಿಸಿದೆ .
