ತೆಕ್ಕಟ್ಟೆ : ಆನ್​ಲೈನ್​ ಸರ್ವೀಸ್​ ಸೆಂಟರ್​ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ವಸ್ತು ಸುಟ್ಟು ಭಸ್ಮ

ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಆನ್​ಲೈನ್​ ಸರ್ವೀಸ್​ ಸೆಂಟರ್​ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆಯು ಉಡುಪಿ ಜಿಲ್ಲೆ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಕಣ್ಣುಕೆರೆ ಎಂಬಲ್ಲಿ ಸಂಭವಿಸಿದೆ. ಅಗ್ನಿ ಅವಘಡದಿಂದಾಗಿ 6 ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ.

ಆಶ್ಲೇಷ ಆನ್​ಲೈನ್​ ಸರ್ವೀಸ್​ ಸೆಂಟರ್​ನಲ್ಲಿ ಸೋಮವಾರ ತಡರಾತ್ರಿ ಈ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಂಗಡಿ ಮಾಲೀಕ ಫಣಿರಾಜ ಎಂಬವರು ರಾತ್ರಿ 10 ಗಂಟೆ ವೇಳೆಗೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಇದಾದ ಬಳಿಕ ಈ ದುರಂತ ಸಂಭವಿಸಿದೆ.
ಅಂಗಡಿಯಲ್ಲಿ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ ಸಂಭವಿಸಿದ ಪರಿಣಾಮ ಆನ್​ಲೈನ್​ ಸರ್ವೀಸ್​ ಸೆಂಟರ್​ನಲ್ಲಿದ್ದ ಕಂಪ್ಯೂಟರ್​, ಪ್ರಿಂಟರ್​, ಸ್ಟೇಷನರಿ ವಸ್ತುಗಳು, ಇನ್ವರ್ಟರ್​ ಬ್ಯಾಟರಿ, ಕುರ್ಚಿ ಹಾಗೂ ಮೇಜು ಸೇರಿದಂತೆ ಎಲ್ಲಾ ಪೀಠೋಪಕರಣಗಳು ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: ನಟಿ ರಚಿತಾ ರಾಮ್​ ಚಾಲಕನಿಂದ ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ

ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳೀಯ ಯುವಕರು ನೆರವಿಗೆ ಧಾವಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಫೋನಾಯಿಸಲಾಗಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು – ನೋವು ಸಂಭವಿಸಿಲ್ಲ. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version