ಉಡುಪಿ : ಹಳ್ಳಿಹೈದನ ವಿಭಿನ್ನ ಪ್ರೀ ವೆಡ್ಡಿಂಗ್ ಪೋಟೋಶೂಟ್ : ನೆಟ್ಟಿಗರ ಗಮನಸೆಳೆದ ವಿಡಿಯೋ

Udupi Pre wedding Photoshoot : ಒಂದು ಕಾಲದಲ್ಲಿ ಮದುವೆ ಅನ್ನೋದು ಅತ್ಯಂತ ಸಂಪ್ರದಾಯಬದ್ಧ ಆಚರಣೆಯಾಗಿತ್ತು. ಆದರೀಗ ಮದುವೆಗೂ ಆಧುನಿಕತೆಯ ಟಚ್ ಸಿಕ್ಕಿದೆ. ಮದುವೆಯ ಸಾಂಪ್ರದಾಯಿಕ ಆಚರಣೆಗಳ ಜೊತೆ ಪೋಟೋಶೂಟ್ ಗಳು ಮಹತ್ವ ಪಡೆದಿವೆ. ‌

ಮದುವೆಗೂ ಮುನ್ನ ವಧು-ವರರು ಪ್ರವಾಸಿತಾಣಗಳು, ನದಿದಂಡೆಗಳು- ಸಮುದ್ರತೀರದಲ್ಲಿ ವೈರೈಟಿ ಪೋಸ್ ಗಳಲ್ಲಿ ಪೋಟೋ ತೆಗೆಸಿಕೊಳ್ಳೋ ಪದ್ಧತಿ ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಜೋಡಿ ತಮ್ಮ ಮದುವೆಯ ಪೋಟೋಶೂಟ್ ಗೆ ರೆಟ್ರೋ ಲುಕ್ ನೀಡಿದ್ದಾರೆ. ಮೂಲ ಬದುಕಿನ ಜೊತೆ ಬೆಸೆದುಕೊಂಡ ಈ ವಿಭಿನ್ನ ಪೋಟೋಶೂಟ್ ಸಖತ್ ಸದ್ದು ಮಾಡ್ತಿದೆ.

ಸದ್ಯ ಫ್ರೀ ವೆಡ್ಡಿಂಗ್ ಶೂಟ್ ಎಂದರೇ ಶಾರ್ಟ್ ಸ್ಕರ್ಟ್- ಮುತ್ತಿಕ್ಕೋ ಹುಡುಗ, ಹೂವಿನ ಬೊಕೆ, ಕಾಕ್ ಟೇಲ್ ಲುಕ್ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ ಉಡುಪಿ ಮೂಲದ ಈ ಜೋಡಿ ಮಾತ್ರ ಮರಳಿ ಮಣ್ಣಿಗೆ ಎಂಬಂತೆ ತಮ್ಮ ನೆಲದ ಸಂಸ್ಕೃತಿಯಂತೆ ಪೋಟೋ ಶೂಟ್ ನಡೆಸಿ ಗಮನ ಸೆಳೆದಿದ್ದಾರೆ.

ಬೆಳ್ಳಂಬೆಳಗ್ಗೆ ಸ್ನಾನ ಮಾಡಿ , ಸೀರೆ ಉಟ್ಟು ಮುಡಿಕಟ್ಟಿ ಬರುವ ಮದುವೆ ಹೆಣ್ಣು ತುಳಸಿಗಿಡಕ್ಕೆ ನೀರೆರೆದು ಕೈಮುಗಿದು ಪ್ರಾರ್ಥಿಸುತ್ತಿದ್ದರೇ, ಅತ್ತ ಮದುವೆ ಗಂಡ ಎಮ್ಮೆ ಬಿಟ್ಟುಕೊಂಡು ತೋಟಕ್ಕೆ ಹೋಗೋ ದೃಶ್ಯದೊಂದಿಗೆ ಈ ಫ್ರೀ ವೆಡ್ಡಿಂಗ್ ಶೂಟ್ ಆರಂಭವಾಗುತ್ತದೆ.

ದೀಕ್ಷಿತ್ ಶೆಟ್ಟಿ ಮತ್ತು ಪ್ರತಿಭಾ ಅವರ ಈ ಪೋಟೋ ಶೂಟ್ ಟ್ರೆಂಡಿಯಾಗಿರೋದರ ಜೊತೆಗೆ ನೋಡೋರ ಗಮನಸೆಳೆಯುವಂತಿದೆ. ದಟ್ಟ ಹಸಿರಿನ ದೃಶ್ಯಗಳು ಅದರ ನಡುವೆ ಮುತ್ತಿನ ಸರ, ಬೈತಲೆ ತೆಗೆದು ಬಾಚಿಕಟ್ಟಿದ ಕೂದಲು, ಮಲ್ಲಿಗೆ ಮುಡಿದ ಹುಡುಗಿ ಹಾಲು ಬಾಸ್ಕೆಟ್ ಹಿಡಿದು ಬರೋ ದೃಶ್ಯ ನೋಡಿದರೇ ಎಂತವರಾದರೂ ಮೆಚ್ಚಿಕೊಳ್ಳಲೇ ಬೇಕು.

ಇನ್ನು ಕೊಟ್ಟಿಗೆಯಲ್ಲಿ ಎಮ್ಮೆ ಮೈತೊಳೆದು ದಣಿದ ಹುಡುಗನಿಗೆ ಬಾಯಾರಿಕೆ ತೀರಿಸಲು ಚಂಬು ತುಂಬ ನೀರು ತಂದುಕೊಡುವ ಹುಡುಗಿ, ಇಬ್ಬರೂ ಪ್ರಕೃತಿಯ ನಡುವೆ ಕೂತು ಆಡುವ ತುಂಟಾಟ ಹೀಗೆ ಪ್ರೇಮಿಗಳ ಸಹಜವಾದ ಚಿತ್ರಣದಿಂದ ಈ ಪೋಟೋಶೂಟ್ ಕ್ಯೂಟ್ ಎನ್ನಿಸುವಂತಿದೆ.

ಹಳ್ಳಿಯ ಹೂವು ಕೊಟ್ಟು ಪ್ರಪೋಸ್ ಮಾಡುವ ಹುಡುಗ, ಮಾತು ಮಾತಿಗೂ ನಾಚಿಕೊಳ್ಳುವ ಪ್ರತಿಭಾ ಫ್ರೀ ವೆಡ್ಡಿಂಗ್ ಶೂಟ್ ಗೆ ತುಳು ಗೀತೆಯೊಂದು ಜೊತೆಯಾಗಿದ್ದು, ಐದು ಬೆರಳಿಗೆ ಬೋಟಿ ಸಿಕ್ಕಿಸಿಕೊಂಡು ತಿನ್ನುವ ಬಾಲ್ಯದ ಆಟಗಳನ್ನು ಈ ಜೋಡಿ ನೆನಪಿಸಿದೆ.

ಇಷ್ಟೆಲ್ಲ ಗ್ರಾಮ್ಯಬದುಕಿನ ಸೌಂದರ್ಯವನ್ನು ತೆರೆದಿಟ್ಟ ದೀಕ್ಷಿತ್ ಮತ್ತು ಪ್ರತಿಭಾ ಜೋಡಿ ನವೆಂಬರ್ 3 ರಂದು ಹೊಸಬಾಳಿಗೆ ಕಾಲಿರಿಸಲಿದೆ. ನೀವು ಇವರ ವಿಡಿಯೋ ನೋಡಿ ಶುಭಹಾರೈಸಿ ಬಿಡಿ.

Udupi Pre wedding Photoshoot

Exit mobile version