35 ವರ್ಷಗಳ ಹಿಂದೆ ಪಡೆದ 1,000 ಸಾಲಕ್ಕೆ 25,000 ಮರಳಿಸಿದ ವ್ಯಕ್ತಿ!

ಸೌದಿ ಅರೇಬಿಯಾದಲ್ಲಿ ಸ್ನೇಹಿತನಿಂದ ಪಡೆದಿದ್ದ 120 ರಿಯಾಲ್ (ಅಂದಿನ ಮೌಲ್ಯ ಸುಮಾರು ₹1,000) ಸಾಲವನ್ನು ಬರೋಬ್ಬರಿ 35 ವರ್ಷಗಳ ನಂತರ ₹25,000 ರೂಪಾಯಿಗಳಾಗಿ ಮರುಪಾವತಿಸಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಸಾಲ ಪಡೆದ ಹಣವನ್ನು ಮರಳಿ ನೀಡುವುದಿರಲಿ, ಕೊಟ್ಟವರನ್ನೇ ಮರೆತುಬಿಡುವ ಈ ದಿನಗಳಲ್ಲಿ ಕೇರಳದ ವ್ಯಕ್ತಿಯೊಬ್ಬರು ಮೂರು ದಶಕಗಳ ಹಿಂದಿನ ಹಳೆಯ ನೆನಪನ್ನು ಮತ್ತು ಕೊಟ್ಟ ಮಾತನ್ನು ಉಳಿಸಿಕೊಂಡು ವಿಶಿಷ್ಟ ಮಾದರಿ ನೆಟ್ಟಿದ್ದಾರೆ. ಸೌದಿ ಅರೇಬಿಯಾದಲ್ಲಿ ಸ್ನೇಹಿತನಿಂದ ಪಡೆದಿದ್ದ 120 ರಿಯಾಲ್ (ಅಂದಿನ ಮೌಲ್ಯ ಸುಮಾರು ₹1,000) ಸಾಲವನ್ನು ಬರೋಬ್ಬರಿ 35 ವರ್ಷಗಳ ನಂತರ ₹25,000 ರೂಪಾಯಿಗಳಾಗಿ ಮರುಪಾವತಿಸಿ ತಮ್ಮ ಪ್ರಾಮಾಣಿಕತೆಯನ್ನು (Viral News) ಮೆರೆದಿದ್ದಾರೆ.

ಸೌದಿಯಲ್ಲಿ ಚಿಗುರಿದ ಸ್ನೇಹ
1991 ರಲ್ಲಿ ಕೇರಳದ ಇಸ್ಮಾಯಿಲ್ ಮತ್ತು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಧರ್ಮಪುರಿ ನಿವಾಸಿ ಎಡ್ಲಾ ಲಚಣ್ಣ ಸೌದಿ ಅರೇಬಿಯಾದ ಅಬ್ಕೈಕ್‌ನಲ್ಲಿ ಸಹೋದ್ಯೋಗಿಗಳಾಗಿದ್ದರು. ಇಬ್ಬರೂ ಇನ್ನೂ ಮೂವರು ವಲಸಿಗ ಕಾರ್ಮಿಕರೊಂದಿಗೆ ಒಂದೇ ಕೋಣೆಯನ್ನು ಹಂಚಿಕೊಂಡು ಸುಮಾರು ಐದು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಈ ಸಮಯದಲ್ಲಿ ವೈಯಕ್ತಿಕ ಅಗತ್ಯಕ್ಕಾಗಿ ಇಸ್ಮಾಯಿಲ್ ಅವರು ಲಚಣ್ಣ ಅವರಿಂದ 120 ಸೌದಿ ರಿಯಾಲ್ ಸಾಲ ಪಡೆದಿದ್ದರು. ಪರಿಸ್ಥಿತಿ ಸರಿಯಾದಾಗ ಹಣವನ್ನು ಮರಳಿ ನೀಡುವುದಾಗಿ ಭರವಸೆಯನ್ನೂ ನೀಡಿದ್ದರು.

ಸಂಪರ್ಕ ಕಡಿತ
ಕೆಲ ದಿನಗಳ ನಂತರ ಲಚಣ್ಣ ಭಾರತಕ್ಕೆ ಮರಳಿದರು. ಅಂದಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳಾಗಲಿ ಅಥವಾ ಸಾಮಾಜಿಕ ಮಾಧ್ಯಮಗಳಾಗಲಿ ಇಲ್ಲದ ಕಾರಣ, ಇಬ್ಬರ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತು. ವರ್ಷಗಳು ಉರುಳಿದಂತೆ ಇಬ್ಬರೂ ತಮ್ಮದೇ ಬದುಕಿನಲ್ಲಿ ಬ್ಯುಸಿಯಾದರು.

ನೆನಪಿನ ಆಧಾರದ ಮೇಲೆ ಹುಡುಕಾಟ
ಹಣದ ಮೊತ್ತ ಚಿಕ್ಕದಾಗಿದ್ದರೂ ಇಸ್ಮಾಯಿಲ್ ಮಾತ್ರ ತಾವು ಪಡೆದ ಸಾಲವನ್ನು ಮತ್ತು ಸ್ನೇಹಿತನಿಗೆ ನೀಡಿದ್ದ ಮಾತನ್ನು ಮರೆತಿರಲಿಲ್ಲ. ಇತ್ತೀಚೆಗೆ ಅವರು ಲಚಣ್ಣ ಅವರನ್ನು ಹುಡುಕಲು ನಿರ್ಧರಿಸಿದರು. ಆದರೆ ಅವರ ಬಳಿ ಲಚಣ್ಣ ಅವರ ಫೋನ್ ನಂಬರ್ ಆಗಲಿ ಅಥವಾ ನಿಖರವಾದ ವಿಳಾಸವಾಗಲಿ ಇರಲಿಲ್ಲ. ಲಚಣ್ಣ ಅವರು ತೆಲಂಗಾಣದ ‘ಧರ್ಮಪುರಿ’ ಗ್ರಾಮದವರು ಎಂಬ ಒಂದೇ ಒಂದು ನೆನಪು ಅವರ ಬಳಿ ಇತ್ತು.

10 ಲಕ್ಷ ಹೂಡಿಕೆ ಮಾಡಿ 1 ಕೋಟಿ ಗಳಿಸಿ! ಎಲ್‌ಐಸಿಯ ಈ ಸೂಪರ್ ಪ್ಲಾನ್ ಬಗ್ಗೆ ಇಲ್ಲಿದೆ ಮಾಹಿತಿ

ಅದೇ ನೆನಪಿನ ಆಧಾರದ ಮೇಲೆ ಇಸ್ಮಾಯಿಲ್ ಧರ್ಮಪುರಿಗೆ ಪ್ರಯಾಣ ಬೆಳೆಸಿದರು. ಅಲ್ಲಿನ ಸ್ಥಳೀಯ ನಿವಾಸಿಗಳ ಸಹಾಯದಿಂದ ಕೊನೆಗೂ ಜುಲೈ 9 ರಂದು ತಮ್ಮ ಹಳೆಯ ಸ್ನೇಹಿತನ ಮನೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.

ವಾಟ್ಸಾಪ್ ಕರೆ ಮೂಲಕ ಮಾತುಕತೆ, ₹25,000 ಹಸ್ತಾಂತರ:
ಲಚಣ್ಣ ಸದ್ಯ ಮತ್ತೆ ಗಲ್ಫ್ ದೇಶದಲ್ಲಿ ಕೆಲಸ ಮಾಡುತ್ತಿರುವುದರಿಂದ, ಇಸ್ಮಾಯಿಲ್ ಅವರು ಲಚಣ್ಣ ಅವರ ಕುಟುಂಬದವರನ್ನು ಭೇಟಿಯಾಗಿ ₹25,000 ಹಣವನ್ನು ಹಸ್ತಾಂತರಿಸಿದರು. ನಂತರ ಲಚಣ್ಣ ಅವರೊಂದಿಗೆ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಮಾತನಾಡಿ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಸ್ನೇಹಿತನ ಭಾವುಕ ಪ್ರತಿಕ್ರಿಯೆ:
ಇಸ್ಮಾಯಿಲ್ ಅವರ ಈ ನಡೆಗೆ ಲಚಣ್ಣ ಭಾವುಕರಾಗಿದ್ದಾರೆ. “35 ವರ್ಷಗಳ ಹಿಂದೆ ನಾನು ನೀಡಿದ ಸಾಲವನ್ನು ನೆನಪಿಟ್ಟುಕೊಂಡು, ಹುಡುಕಿಕೊಂಡು ಬಂದು ಹಣ ನೀಡಿರುವುದು ನನ್ನಲ್ಲಿ ಆಶ್ಚರ್ಯ ಮೂಡಿಸಿದೆ. ಅವರು ಬಡ್ಡಿ ಸೇರಿಸಿ ಹಣ ನೀಡಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರ ಈ ನಡೆ ನಮ್ಮ ಸ್ನೇಹದ ಶಕ್ತಿ ಮತ್ತು ಅವರ ಪ್ರಾಮಾಣಿಕತೆಗೆ ಸಾಕ್ಷಿ” ಎಂದು ಲಚಣ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

Exit mobile version