Kannada News Next

business

ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್: ಒಂದೆಡೆ ಕುಸಿದ ಚಿನ್ನದ ಬೆಲೆ, ಮತ್ತೊಂದೆಡೆ ಗಗನಕ್ಕೇರಿದ ಕಚ್ಚಾ ತೈಲ ದರ

ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ ಉಂಟಾಗಿರುವ ರಾಜತಾಂತ್ರಿಕ ಹಾಗೂ ಮಿಲಿಟರಿ ಸಂಘರ್ಷವು ಜಾಗತಿಕ ಮಾರುಕಟ್ಟೆಯ ಮೇಲೆ ತೀವ್ರ ಸ್ವರೂಪದ ಪ್ರಭಾವ ಬೀರಿದೆ.

By ರಶ್ಮಿ ಎಸ್. | Rashmi S
Effect of the US-Iran war

ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ ಉಂಟಾಗಿರುವ ರಾಜತಾಂತ್ರಿಕ ಹಾಗೂ ಮಿಲಿಟರಿ ಸಂಘರ್ಷವು ಜಾಗತಿಕ ಮಾರುಕಟ್ಟೆಯ ಮೇಲೆ ತೀವ್ರ ಸ್ವರೂಪದ ಪ್ರಭಾವ ಬೀರಿದೆ. ಉಭಯ ರಾಷ್ಟ್ರಗಳ ಮಧ್ಯೆ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿದ್ದು, ಮತ್ತೊಂದೆಡೆ ಹೂಡಿಕೆದಾರರ ನೆಚ್ಚಿನ ಲೋಹವಾದ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಸತತ ಏಳನೇ ದಿನವೂ ಇಳಿಕೆಯ ಹಾದಿಯಲ್ಲಿ ಮುಂದುವರಿದಿರುವ ಬಂಗಾರದ ದರವು ಗ್ರಾಹಕರಿಗೆ ನಿರಾಳತೆ ತಂದಿದ್ದರೂ, ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.

ಭಾರತೀಯ ಮಲ್ಟಿ ಕಮಾಡಿಟಿ ಎಕ್ಸ್ಚೆಂಜ್ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯು ಶೇಕಡಾ ಒಂದಕ್ಕಿಂತಲೂ ಹೆಚ್ಚು ಕುಸಿದಿದ್ದು, ಪ್ರತಿ ಹತ್ತು ಗ್ರಾಂ ಚಿನ್ನದ ದರದಲ್ಲಿ ಸುಮಾರು 1,559 ರೂಪಾಯಿಗಳಷ್ಟು ಇಳಿಕೆಯಾಗಿದೆ. ಕೇವಲ ದೇಶೀಯ ಮಾರುಕಟ್ಟೆಯಷ್ಟೇ ಅಲ್ಲದೆ, ಜಾಗತಿಕ ಆರ್ಥಿಕತೆಯ ಪ್ರಮುಖ ಕೇಂದ್ರವಾದ ನ್ಯೂಯಾರ್ಕ್‌ನ ಫ್ಯೂಚರ್ಸ್ ಮಾರುಕಟ್ಟೆಯಲ್ಲೂ ಸತತ ನಾಲ್ಕು ದಿನಗಳಿಂದ ಚಿನ್ನದ ಮೌಲ್ಯವು ಇಳಿಮುಖವಾಗುತ್ತಿದ್ದು, ಕಳೆದ ಮೂರು ವಾರಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಪಶ್ಚಿಮ ಏಷ್ಯಾದಲ್ಲಿ ಇತ್ತೀಚೆಗೆ ನಡೆದ ದಾಳಿ ಮತ್ತು ಪ್ರತಿದಾಳಿಗಳ ಸರಣಿಯು ಈ ಆರ್ಥಿಕ ಏರುಪೇರಿಗೆ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆದ ಕಾರ್ಯಾಚರಣೆಗಳು ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡುವ ಭೀತಿ ಮೂಡಿಸಿವೆ.

ಈ ರಾಜಕೀಯ ಅಸ್ಥಿರತೆಯು ಜಾಗತಿಕವಾಗಿ ಹಣದುಬ್ಬರ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಬಡ್ಡಿ ದರಗಳ ಏರಿಕೆಯ ಆತಂಕವನ್ನು ಹೆಚ್ಚಿಸಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಸುರಕ್ಷಿತ ಹೂಡಿಕೆಯ ಮೇಲಿನ ಹಿಡಿತ ಸಡಿಲಗೊಂಡಿದ್ದು, ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಸಹ ಇಳಿಮುಖದ ಟ್ರೆಂಡ್ ಮುಂದುವರಿಸಿದೆ.