businessಪ್ರಮುಖ ಸುದ್ದಿಗಳು

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಬೆಳ್ಳಿ ದರವೂ ಕುಸಿತ : ಎಷ್ಟಿದೆ ಇಂದಿನ ಚಿನ್ನ, ಬೆಳ್ಳಿಯ ದರ

ಚಿನ್ನ ಮಾತ್ರವಲ್ಲ ಬೆಳ್ಳಿಯ ದರದಲ್ಲಿಯೂ ದಾಖಲೆಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಬೆಳ್ಳಿ ಸುಮಾರು 1.71% ಕುಸಿದು 65.85 ಡಾಲರ್ ಪ್ರತಿ ಔನ್ಸ್ ಮಟ್ಟಕ್ಕೆ ತಲುಪಿತ್ತು.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
gold silver price today falls kannada news
gold silver price today falls kannada news

ಬೆಂಗಳೂರು: ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನ ಬೆಳ್ಳಿಯ ದರದಲ್ಲಿ ಬಾರೀ ಇಳಿಕೆಯಾಗಿದೆ. ಚಿನ್ನ, ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ದೇಶೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಾಣುತ್ತಿದ್ದು, ಹೂಡಿಕೆದಾರರು ಹೂಡಿಕೆಗೆ ಮುಂದಾಗಿದ್ದಾರೆ.

ಚಿನ್ನದ ದರದಲ್ಲಿ ಇಳಿಕೆ

ಆಗಸ್ಟ್ 31ರ ಆರಂಭಿಕ ವಹಿವಾಟಿನಲ್ಲಿ COMEX ಚಿನ್ನದ ಫ್ಯೂಚರ್ಸ್ ಸುಮಾರು 1.23% ಕುಸಿದು 4,474.30 ಡಾಲರ್ ಪ್ರತಿ ಔನ್ಸ್ ಮಟ್ಟಕ್ಕೆ ತಲುಪಿದೆ. ಇದೇ ವೇಳೆ ಭಾರತದಲ್ಲಿ MCX ಚಿನ್ನದ ಫ್ಯೂಚರ್ಸ್ ಕೂಡ ಇಳಿಕೆ ಕಂಡಿದೆ. ಈ ಹಿಂದೆ ಚಿನ್ನದ ಬೆಲೆ ಆರಂಭಿಕ ವಹಿವಾಟಿನಲ್ಲಿ ಸುಮಾರು 0.91% ಇಳಿದು ಪ್ರತಿ 10 ಗ್ರಾಂಗೆ ₹1,54,520ರ ಮಟ್ಟಕ್ಕೆ ಬಂದಿತ್ತು.

ಇದಕ್ಕೂ ಮುನ್ನ ಆಗಸ್ಟ್ 28ರಂದು ದೇಶೀಯ ಸ್ಪಾಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಸುಮಾರು ₹1,58,854ರ ಮಟ್ಟದಲ್ಲಿತ್ತು. ಹೀಗಾಗಿ ಹೊಸ ವಾರದ ಆರಂಭದಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದೆ.

ಬೆಳ್ಳಿಗೂ ಬೆಲೆ ಕುಸಿತ

ಚಿನ್ನ ಮಾತ್ರವಲ್ಲ ಬೆಳ್ಳಿಯ ದರದಲ್ಲಿಯೂ ದಾಖಲೆಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಅದ್ರಲ್ಲೂ ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿ ಸುಮಾರು 1.71% ಕುಸಿದು 65.85 ಡಾಲರ್ ಪ್ರತಿ ಔನ್ಸ್ ಮಟ್ಟಕ್ಕೆ ತಲುಪಿತ್ತು. ದೇಶೀಯ MCX ಮಾರುಕಟ್ಟೆಯಲ್ಲೂ ಬೆಳ್ಳಿ ಫ್ಯೂಚರ್ಸ್ ಕುಸಿತ ಕಂಡಿದ್ದು, ಸೆಪ್ಟೆಂಬರ್ ಒಪ್ಪಂದದ ಬೆಳ್ಳಿ ಆರಂಭಿಕ ವಹಿವಾಟಿನಲ್ಲಿ ಸುಮಾರು ₹2,33,500 ಪ್ರತಿ ಕೆ.ಜಿ. ಮಟ್ಟದಲ್ಲಿತ್ತು.

ಸದ್ಯದ ಮಾರುಕಟ್ಟೆಯ ಸ್ಥಿತಿಗತಿಗಳನ್ನು ನೋಡಿದ್ರೆ, ಚಿನ್ನ ಮತ್ತು ಬೆಳ್ಳಿ ಎರಡೂ ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದಾರೆ. ಜಾಗತಿಕ ಆರ್ಥಿಕ ಬೆಳವಣಿಗೆಗಳು, ಅಮೆರಿಕದ ಬಡ್ಡಿದರದ ನಿರೀಕ್ಷೆಗಳು ಮತ್ತು ಡಾಲರ್ ಮೌಲ್ಯದ ಏರಿಳಿತಗಳು ಮುಂದಿನ ದಿನಗಳಲ್ಲಿ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಪ್ರಮುಖ ನಗರಗಳಲ್ಲಿ ಎಷ್ಟಿದೆ ಇಂದಿನ ಚಿನ್ನದ ದರ

ಆಗಸ್ಟ್ 31ರ ಲಭ್ಯವಿರುವ ಮಾರುಕಟ್ಟೆ ಮಾಹಿತಿಯ ಪ್ರಕಾರ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ದರಗಳು ಬಹುತೇಕ ಸಮೀಪದಲ್ಲಿವೆ. ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನ ಸುಮಾರು ₹1,58,390 ಪ್ರತಿ 10 ಗ್ರಾಂ, ಹಾಗೂ 22 ಕ್ಯಾರೆಟ್ ಚಿನ್ನ ಸುಮಾರು ₹1,45,200 ಪ್ರತಿ 10 ಗ್ರಾಂ ಮಟ್ಟದಲ್ಲಿದೆ ಎಂದು ವರದಿಯಾಗಿದೆ.

ಆದರೆ ಚಿನ್ನದ ಆಭರಣ ಖರೀದಿಸುವಾಗ ಕೇವಲ ಮಾರುಕಟ್ಟೆ ದರವನ್ನು ಮಾತ್ರ ಪರಿಗಣಿಸಬಾರದು. ಆಭರಣದ ವಿನ್ಯಾಸ, ಮೇಕಿಂಗ್ ಚಾರ್ಜ್, GST ಹಾಗೂ ಇತರೆ ಶುಲ್ಕಗಳಿಂದ ಅಂತಿಮವಾಗಿ ಗ್ರಾಹಕರು ಪಾವತಿಸುವ ಮೊತ್ತ ಬದಲಾಗಬಹುದು.

ಚಿನ್ನ, ಬೆಳ್ಳಿಯ ದರ : ಮುಂದೇನು ?

ಜಾಗತಿಕ ಮಾರುಕಟ್ಟೆಯ ಪ್ರಸ್ತುತ ಪರಿಸ್ಥಿತಿ ಚಿನ್ನ ಮತ್ತು ಬೆಳ್ಳಿಗೆ ಸದ್ಯಕ್ಕೆ ಎಚ್ಚರಿಕೆಯನ್ನೂ ಸೂಚಿಸುತ್ತಿದೆ.. ತಜ್ಞರ ಪ್ರಕಾರ, ಮುಂದಿನ ವಹಿವಾಟಿನಲ್ಲಿ ಅಮೂಲ್ಯ ಲೋಹಗಳು ಫ್ಲ್ಯಾಟ್ ಅಥವಾ ಮತ್ತಷ್ಟು ದುರ್ಬಲ ಆರಂಭ ಕಾಣುವ ಸಾಧ್ಯತೆ ಇದೆ.

ಹೀಗಾಗಿ ಚಿನ್ನ ಖರೀದಿಸಲು ಮುಂದಾಗಿರುವವರು ತಮ್ಮ ನಗರದ ಸ್ಥಳೀಯ ಆಭರಣ ಮಾರುಕಟ್ಟೆಯ ದರವನ್ನು ಪರಿಶೀಲಿಸುವುದು ಉತ್ತಮ. ವಿಶೇಷವಾಗಿ 22 ಕ್ಯಾರೆಟ್ ಚಿನ್ನ ಖರೀದಿಸುವಾಗ ಹಾಲ್‌ಮಾರ್ಕ್ ಮತ್ತು HUID ವಿವರಗಳನ್ನು ಪರಿಶೀಲಿಸುವುದು ಅಗತ್ಯ. ಹೂಡಿಕೆ ಉದ್ದೇಶದಿಂದ ಚಿನ್ನ ಅಥವಾ ಬೆಳ್ಳಿ ಖರೀದಿಸುವವರು ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸಿ, ಅಗತ್ಯವಿದ್ದರೆ ಪ್ರಮಾಣೀಕೃತ ಹಣಕಾಸು ತಜ್ಞರ ಸಲಹೆ ಪಡೆಯುವುದು ಸೂಕ್ತ.

Topics

ಸಂಬಂಧಿತ ಸುದ್ದಿಗಳು