Kannada News Next

business

PM ಕಿಸಾನ್ 24ನೇ ಕಂತಿನ ಹಣ ಪಡೆಯೋಕೆ ಈ 4 ಕೆಲಸ ಮಾಡುವುದು ಕಡ್ಡಾಯ

ಭಾರತ ಸರಕಾರ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯ ಫಲಾನುಭವಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
PM Kisan 24th Installment Farmers Must Complete Four Important Tasks To Receive Money

ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ರೈತರ ಅನುಕೂಲಕ್ಕಾಗಿ ಪಿಎಂ ಕಿಸಾನ್‌ ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ಕೇಂದ್ರ ಸರಕಾರ 24ನೇ ಕಂತಿನ ಹಣ ಬಿಡುಗಡೆಗೆ ಸಿದ್ದತೆ ನಡೆಸುತ್ತಿದ್ದು, ಅಕ್ಟೋಬರ್‌ ತಿಂಗಳಲ್ಲಿ ಅರ್ಹ ರೈತರ ಖಾತೆಗೆ ಹಣ ಜಮೆ ಆಗಲಿದೆ. ಆದರೆ ರೈತರು ಹಣ ಪಡೆಯೋದಕ್ಕೆ ಈ 4 ನಾಲ್ಕು ಕೆಲಸಗಳನ್ನು ಮಾಡುವುದು ಕಡ್ಡಾಯವಾಗಿದೆ.

ಭಾರತ ಸರಕಾರ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯ ಫಲಾನುಭವಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದೆ. ಯೋಜನೆಯ 23ನೇ ಕಂತು ಬಿಡುಗಡೆ ಆಗಿ ಸುಮಾರು ನಾಲ್ಕು ತಿಂಗಳುಗಳು ಕಳೆದಿವೆ. ದಸರಾ, ದೀಪಾವಳಿಯ ಹೊತ್ತಲ್ಲೇ 24ನೇ ಕಂತಿನ ಹಣ ಜಮೆ ಆಗಲಿದೆ.

ಈ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ' (DBT) ಮೂಲಕ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ 2000 ರೂಪಾಯಿ ವರ್ಗಾವಣೆ ಆಗಲಿದೆ. ಆದರೆ ಕೇಂದ್ರ ಸರಕಾರ ಸೂಚಿಸಿರುವ ಈ ಕೆಲಸಗಳನ್ನು ರೈತರು ಕಡ್ಡಾಯವಾಗಿ ಮಾಡಲೇ ಬೇಕಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ತಾರಕೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ PM-KISAN ಯೋಜನೆಯ 23ನೇ ಕಂತನ್ನು ಬಿಡುಗಡೆ ಮಾಡಿದ್ದರು. ಸುಮಾರು 9.44 ಕೋಟಿ ರೈತರಿಗೆ 18,880 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ವರ್ಗಾವಣೆ ಮಾಡಿತ್ತು.

ಪಿಎಂ-ಕಿಸಾನ್ (PM-KISAN) ಕಂತುಗಳನ್ನು ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಅಕ್ಟೋಬರ್‌ 20ರ ಸುಮಾರಿಗೆ ಮುಂದಿನ ಕಂತಿನ ಹಣ ರೈತರ ಖಾತೆಗೆ ಜಮೆ ಆಗಲಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳು ಒಟ್ಟಿಗೆ ಬರುತ್ತಿರೋದ್ರಿಂದಾಗಿ ರೈತರಿಗೆ ಖುಷಿ ಕೊಡಲು ಕೇಂದ್ರ ಸರಕಾರ ಸಿದ್ದತೆ ಮಾಡಿಕೊಂಡಿದೆ.

ಭಾರತದಲ್ಲಿ 2019 ರಲ್ಲಿ ಆರಂಭವಾದ ಪಿಎಂ-ಕಿಸಾನ್ ಯೋಜನೆ ಅರ್ಹ ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿಗಳನ್ನು ತಲಾ 2,000 ರೂಪಾಯಿಗಳ ಮೂರು ಸಮಾನ ಕಂತುಗಳ ಮೂಲಕ ನೀಡಲಾಗುತ್ತದೆ. ಕೇಂದ್ರ ಸರಕಾರ ಈ ಯೋಜನೆಯ ಅಡಿಯಲ್ಲಿ ಇದುವರೆಗೆ ಒಟ್ಟು 4.46 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಿತರಣೆ ಮಾಡಿದೆ.

24ನೇ ಕಂತು ಪಡೆಯೋದಕ್ಕೆ ಈ ಕೆಲಸ ಮಾಡುವುದು ಕಡ್ಡಾಯ

ಪಿಎಂ ಕಿಸಾನ್‌ನ 24ನೇ ಕಂತು ಯಾವುದೇ ವಿಳಂಬವಿಲ್ಲದೆ ನಿಮ್ಮ ಖಾತೆಗೆ ಜಮೆ ಆಗಬೇಕಾದ್ರೆ ರೈತರು ಕಡ್ಡಾಯವಾಗಿ ಈ ಕೆಳಗಿನ ಕೆಲಸಗಳನ್ನು ಮಾಡಲೇ ಬೇಕಾಗಿದೆ.

1. ಇ-ಕೆವೈಸಿ (e-KYC) ಪೂರ್ಣಗೊಳಿಸಿ

ಪಿಎಂ ಕಿಸಾನ್‌ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಬೇಕಾದ್ರೆ ಕಡ್ಡಾಯವಾಗಿ ರೈತರು ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲರಾದವರಿಗೆ ಕಂತಿನ ಹಣ ಸಿಗುವುದಿಲ್ಲ.

2. ಬ್ಯಾಂಕ್ ಖಾತೆಗೆ ಆಧಾರ್ ಜೊತೆ ಲಿಂಕ್‌ ಮಾಡಿ

ನಿಮ್ಮ ಆಧಾರ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಜೋಡಿಸಬೇಕು ಮತ್ತು ಡಿಬಿಟಿ (DBT - ನೇರ ಲಾಭ ವರ್ಗಾವಣೆ) ಸೌಲಭ್ಯವು ಸಕ್ರಿಯವಾಗಿರಬೇಕು.

3. ಭೂ ದಾಖಲೆಗಳನ್ನು ಪರಿಶೀಲಿಸಿ

ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ನಿಮ್ಮ ಭೂ ದಾಖಲೆಗಳು (ಲ್ಯಾಂಡ್ ಸೀಡಿಂಗ್) ಸರಿಯಾಗಿ ನವೀಕರಿಸಲ್ಪಟ್ಟಿವೆಯೇ ಎಂದು ಪರಿಶೀಲಿಸಿ. ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಪ್ರತಿ ಕುಟುಂಬದ ಒಬ್ಬ ಅರ್ಹ ಸದಸ್ಯರು ಮಾತ್ರ ಈ ಪ್ರಯೋಜನವನ್ನು ಪಡೆಯಬಹುದು.

4. ರೈತ ನೋಂದಣಿಯನ್ನು ಪೂರ್ಣಗೊಳಿಸಿ

ರೈತರು 'ರೈತ ನೋಂದಣಿ'ಯ (Farmer Registry) ಅಡಿಯಲ್ಲಿ ನೋಂದಾಯಿಸಿ ಕೊಳ್ಳಬೇಕು ಮತ್ತು ತಮ್ಮ ವಿಶಿಷ್ಟ ರೈತ ಐಡಿ (Unique Farmer ID) ಅನ್ನು ಪಡೆಯಬೇಕು. ಈ ನೋಂದಣಿಯು ಭವಿಷ್ಯದಲ್ಲಿ ಸರ್ಕಾರದ ಇತರ ಕೃಷಿ ಯೋಜನೆಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.