ಕನ್ಫರ್ಮ್ ಟಿಕೆಟ್ ಇದ್ದರೂ ಮಹಿಳೆಗೆ ಸಂಕಷ್ಟ... ಇಲಾಖೆಯಿಂದ ₹2 ಲಕ್ಷ ಪರಿಹಾರ
ರೈಲು ಟಿಕೆಟ್ ಬುಕ್ ಮಾಡುವಾಗ ಮೊಬೈಲ್ ನಂಬರ್‌ನಲ್ಲಿ ಕೇವಲ ಒಂದು ಅಂಕೆ (Digit) ತಪ್ಪಾದರೂ ಎಂತಹ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
By Meghana Pranuth | ಮೇಘನಾ ಪ್ರಣೂತ್
1 min read
ರೈಲು ಟಿಕೆಟ್ ಬುಕ್ ಮಾಡುವಾಗ ಮೊಬೈಲ್ ನಂಬರ್‌ನಲ್ಲಿ ಕೇವಲ ಒಂದು ಅಂಕೆ (Digit) ತಪ್ಪಾದರೂ ಎಂತಹ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಟಿಕೆಟ್ ಇದ್ದರೂ ಮಹಿಳೆಯೊಬ್ಬರನ್ನು ಮಧ್ಯರಾತ್ರಿ ರೈಲಿನಿಂದ ಕೆಳಗಿಳಿಸಿ ಬಂಧಿಸಲಾಗಿದ್ದು, ಕೊನೆಗೆ ರೈಲ್ವೆ ಇಲಾಖೆಯೇ ಭಾರೀ ದಂಡ ತೆರಬೇಕಾಗಿ ಬಂದಿದೆ.
ಮಹಿಳೆಯೊಬ್ಬರು ಎಲ್ಲಾ ನಿಯಮಾನುಸಾರ ಕನ್‌ಫರ್ಮ್ ರಿಸರ್ವೇಶನ್ ಮಾಡಿಕೊಂಡು ರೈಲಿನಲ್ಲಿ ನೆಮ್ಮದಿಯಾಗಿ ಪ್ರಯಾಣಿಸುತ್ತಿದ್ದರು. ಆದರೆ, ಪ್ರಯಾಣದ ಮಧ್ಯೆ ಅವರ ಟಿಕೆಟ್ ರದ್ದಾಗಿದೆ (Cancelled) ಎಂಬ ತಾಂತ್ರಿಕ ಮಾಹಿತಿ ರೈಲ್ವೆ ಅಧಿಕಾರಿಗಳ ಗಮನಕ್ಕೆ ಬಂತು. ಇದರಿಂದ ಅನುಮಾನಗೊಂಡ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ, ರಾತ್ರಿಯೆಂದೂ ನೋಡದೆ ಮಹಿಳೆಯನ್ನು ಮಧ್ಯರಾತ್ರಿ ರೈಲಿನಿಂದ ಕೆಳಗಿಳಿಸಿ ವಶಕ್ಕೆ ಪಡೆದರು.
ಕನ್‌ಫರ್ಮ್ ಟಿಕೆಟ್ ಕೈಯಲ್ಲಿದ್ದರೂ ಈ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಿದ ಆ ಮಹಿಳಿಗೆ ತೀವ್ರ ಮಾನಸಿಕ ಆಘಾತ ಮತ್ತು ಅವಮಾನ ಉಂಟಾಯಿತು.ನಂತರ ಈ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಸಿದಾಗ ಅಚ್ಚರಿಯ ಸತ್ಯ ಹೊರಬಂತು.
ಆ ಮಹಿಳೆಯ ಟಿಕೆಟ್ ರದ್ದಾಗಲು ಆಕೆಯ ಕಡೆಯಿಂದ ಯಾವುದೇ ತಪ್ಪು ನಡೆದಿರಲಿಲ್ಲ. ಟಿಕೆಟ್ ಬುಕ್ ಮಾಡುವಾಗ ಮೊಬೈಲ್ ನಂಬರ್ ನಮೂದಿಸುವಾಗ ಒಂದು ಅಂಕಿ ತಪ್ಪಾಗಿ ಪ್ರಿಂಟ್ ಆಗಿತ್ತು!
ಸಂದೇಶಗಳು ಮತ್ತೊಬ್ಬ ಅಪರಿಚಿತ ವ್ಯಕ್ತಿಯ ಮೊಬೈಲ್‌ಗೆ ತೆರಳಿದ್ದವು. ಆ ವ್ಯಕ್ತಿ ತನ್ನ ಫೋನ್‌ಗೆ ಬಂದ ಸಂದೇಶವನ್ನು ನೋಡಿ, ಆಕಸ್ಮಿಕವಾಗಿ ಅಥವಾ ಅಜಾಗರೂಕತೆಯಿಂದ ಆ ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ರದ್ದುಗೊಳಿಸಿದ್ದಾನೆ ಎಂಬುದು ತನಿಖೆಯಿಂದ ಬಯಲಾಯಿತು.
ತಪ್ಪೇ ಮಾಡದಿದ್ದರೂ ಅನಗತ್ಯವಾಗಿ ಸಂಕಷ್ಟಕ್ಕೀಡಾಗಿ, ಮಾನಸಿಕ ಯಾತನೆ ಅನುಭವಿಸಿದ ಮಹಿಳೆಯ ಪ್ರಕರಣವನ್ನು ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಗಂಭೀರವಾಗಿ ಪರಿಗಣಿಸಿತು. ವಿಚಾರಣೆ ನಡೆಸಿದ ಆಯೋಗ, ದಕ್ಷಿಣ ರೈಲ್ವೆಯ ಈ ವೈಫಲ್ಯವನ್ನು ಖಂಡಿಸಿ ಸಂತ್ರಸ್ತ ಮಹಿಳೆಗೆ ₹2 ಲಕ್ಷ ಪರಿಹಾರ ಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಈ ಘಟನೆಯು ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಒಂದು ದೊಡ್ಡ ಪಾಠವಾಗಿದೆ. ಟಿಕೆಟ್ ಬುಕ್ ಮಾಡುವಾಗ (IRCTC ಅಥವಾ ಏಜೆಂಟ್ ಮೂಲಕ) ಮೊಬೈಲ್ ನಂಬರ್ ಮತ್ತು ಇತರೆ ವಿವರಗಳು ಸರಿಯಾಗಿವೆಯೆ ಎಂದು ಒಮ್ಮೆಗೆ ಎರಡಲ್ಲ ಮೂರು ಬಾರಿ ಪರಿಶೀಲಿಸಿ.
ಒಂದು ಸಣ್ಣ ಅಂಕೆಯ ಅಜಾಗರೂಕತೆಯು ನಿಮ್ಮ ಕನ್‌ಫರ್ಮ್ ಟಿಕೆಟ್ ಅನ್ನು ಅಪಾಯಕ್ಕೆ ಸಿಲುಕಿಸಬಹುದು. ಪ್ರಯಾಣಿಕರು ಒಮ್ಮೆ ಟಿಕೆಟ್ ಬುಕ್ ಮಾಡಿದ ಬಳಿಕವೂ ತಮ್ಮ ಪಿಎನ್‌ಆರ್ (PNR Status) ಸ್ಥಿತಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಆಗಾಗ್ಗೆ ಗಮನಿಸುತ್ತಿರುವುದು ಉತ್ತಮ.
ಸಣ್ಣ ನಿರ್ಲಕ್ಷ್ಯ ದೊಡ್ಡ ತೊಂದರೆಗೆ ಕಾರಣವಾಗಬಹುದು, ಎಚ್ಚರವಿರಲಿ!
Topics
ಸಂಬಂಧಿತ ಸುದ್ದಿಗಳು
business
ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್: ಒಂದೆಡೆ ಕುಸಿದ ಚಿನ್ನದ ಬೆಲೆ, ಮತ್ತೊಂದೆಡೆ ಗಗನಕ್ಕೇರಿದ ಕಚ್ಚಾ ತೈಲ ದರ
business
ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಬೆಳ್ಳಿ ದರವೂ ಕುಸಿತ : ಎಷ್ಟಿದೆ ಇಂದಿನ ಚಿನ್ನ, ಬೆಳ್ಳಿಯ ದರ
business
ಗಗನಕ್ಕೇರಿದ ಈರುಳ್ಳಿ ಬೆಲೆ : ರೈತರ ಮೊಗದಲ್ಲಿ ಹರ್ಷ!
business

