ಸಂಸಾರದ ಜವಾಬ್ದಾರಿ, ಮನೆಗೆಲಸ ಹಾಗೂ ಮಕ್ಕಳ ಆರೈಕೆಯ ನಡುವೆ ತಮ್ಮದೇ ಆದ ನೃತ್ಯದ ಕನಸುಗಳನ್ನು ಬದಿಗಿಟ್ಟು ಬದುಕುತ್ತಿರುವ ಕರುನಾಡ ಅಮ್ಮಂದಿರಿಗಾಗಿ ಜೀ ಕನ್ನಡ ವಾಹಿನಿ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರುನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (DKD) ಇದೀಗ ಅಮ್ಮಂದಿರಿಗಾಗಿ ಪ್ರತ್ಯೇಕವಾಗಿ ‘ಸೂಪರ್ ಮಾಮ್’ ಆವೃತ್ತಿಯೊಂದಿಗೆ ಮರಳಿ ಬರುತ್ತಿದೆ.
ನಿಮ್ಮ ಮಮ್ಮಿಗೆ ಡ್ಯಾನ್ಸ್ ಬರುತ್ತಾ?
ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಜೀ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋ ಸಖತ್ ವೈರಲ್ ಆಗುತ್ತಿದೆ. “ಮಕ್ಕಳೇ, ನಿಮ್ಮ ತಾಯಿಗೆ ಡ್ಯಾನ್ಸ್ ಬರುತ್ತಾ? ಮಮ್ಮೀಸ್ ಆ್ಯಂಡ್ ಮಮ್ಮೀಸ್ ನಿಮ್ಮ ತಾಯಿಗೆ ಡ್ಯಾನ್ಸ್ ಬರುತ್ತಾ”ಎಂಬ ವಿಶಿಷ್ಟ ಕರೆಯೊಂದಿಗೆ ಅಮ್ಮಂದಿರನ್ನು ವೇದಿಕೆಗೆ ಆಹ್ವಾನಿಸಲಾಗುತ್ತಿದೆ.
ಇಷ್ಟು ದಿನ ಕೇವಲ ಮಕ್ಕಳಿಗೆ ಮತ್ತು ಯುವ ಪ್ರತಿಭೆಗಳಿಗೆ ಮಾತ್ರ ಸೀಮಿತವಾಗಿದ್ದ ಈ ವೇದಿಕೆ, ಈಗ ಕರುನಾಡಿನ ಗೃಹಿಣಿಯರ ಸೃಜನಶೀಲತೆಗೆ ಹೊಸ ರೆಕ್ಕೆ ನೀಡಲು ಸಜ್ಜಾಗಿದೆ.
ಸ್ಟೈಲಿಶ್ ಲುಕ್‌ನಲ್ಲಿ ಅಮ್ಮಂದಿರ ಎಂಟ್ರಿ!
ಸಾಂಪ್ರದಾಯಿಕ ಸೀರೆ ಉಟ್ಟು, ಕಾಲಿಗೆ ಸ್ಟೈಲಿಶ್ ಸ್ಪೋರ್ಟ್ಸ್ ಶೂ ಧರಿಸಿ, ಕಣ್ಣಿಗೆ ಕೂಲ್ ಆಗಿರೋ ಸನ್‌ಗ್ಲಾಸ್ ಹಾಕಿ ವಿಭಿನ್ನ ಹಾಗೂ ರಗಡ್ ಲುಕ್‌ನಲ್ಲಿ ಕರ್ನಾಟಕದ ಅಮ್ಮಂದಿರು ವೇದಿಕೆಯ ಮೇಲೆ ಜಬರ್ದಸ್ತ್ ಆಗಿ ಹೆಜ್ಜೆ ಹಾಕಲಿದ್ದಾರೆ.
ಭಾಗವಹಿಸುವುದು ಹೇಗೆ?
ನೃತ್ಯದ ಮೇಲೆ ಒಲವಿರುವ, ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಕಾಯುತ್ತಿರುವ ಕರುನಾಡಿನ ಪ್ರತಿಯೊಬ್ಬ ಅಮ್ಮಂದಿರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು. ಆಡಿಷನ್ ನಡೆಯುವ ನಿಖರವಾದ ಸ್ಥಳಗಳು ಹಾಗೂ ಹೆಚ್ಚಿನ ವಿವರಗಳಿಗಾಗಿ ಜೀ ಕನ್ನಡದ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳನ್ನು (Instagram, Facebook) ಗಮನಿಸಬಹುದಾಗಿದೆ. ಈ ವಿಶೇಷ ಶೋ ಜೀ ಕನ್ನಡ ವಾಹಿನಿ ಹಾಗೂ ಜೀ5 (Zee5) ಒಟಿಪಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿದೆ.
