‘ಕರ್ಣ’ ಸೀರಿಯಲ್ ಪ್ರಿಯರಿಗೆ ಶಾಕ್! ನಿತ್ಯಾ ಪಾತ್ರಕ್ಕೆ ಗುಡ್ ಬೈ ಹೇಳಿದ್ರಾ ನಮ್ರತಾ ಗೌಡ? ಹೊಸ ನಟಿ ಯಾರು?

ಕಿರುತೆರೆ ವೀಕ್ಷಕರ ನೆಚ್ಚಿನ ಸೀರಿಯಲ್‌ಗಳಲ್ಲಿ ಒಂದಾದ ಜೀ ಕನ್ನಡ ವಾಹಿನಿಯ ‘ಕರ್ಣ’ (Karna Serial) ಧಾರಾವಾಹಿಯ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಸುದ್ದಿ ಸಖತ್ ಶಾಕ್ ನೀಡಿದೆ

ಬೆಂಗಳೂರು: ಕಿರುತೆರೆ ವೀಕ್ಷಕರ ನೆಚ್ಚಿನ ಸೀರಿಯಲ್‌ಗಳಲ್ಲಿ ಒಂದಾದ ಜೀ ಕನ್ನಡ ವಾಹಿನಿಯ ‘ಕರ್ಣ’ (Karna Serial) ಧಾರಾವಾಹಿಯ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಸುದ್ದಿ ಸಖತ್ ಶಾಕ್ ನೀಡಿದೆ. ಧಾರಾವಾಹಿಯಲ್ಲಿ ಪ್ರಮುಖ ನೆಗೆಟಿವ್ ಶೇಡ್ ಹೊಂದಿರುವ ‘ನಿತ್ಯಾ’ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಖ್ಯಾತ ನಟಿ ನಮ್ರತಾ ಗೌಡ (Namratha Gowda) ಅವರು ಸೀರಿಯಲ್‌ನಿಂದ ಹೊರನಡೆದಿದ್ದಾರೆ ಎಂಬ ಬಲವಾದ ವದಂತಿಗಳು ಕೇಳಿಬರುತ್ತಿವೆ. ಕಳೆದ ಕೆಲವು ಎಪಿಸೋಡ್‌ಗಳಿಂದ ನಿತ್ಯಾ ಪಾತ್ರ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10ರ ಬಳಿಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದ ನಮ್ರತಾ ಗೌಡ, ‘ಕರ್ಣ’ ಧಾರಾವಾಹಿಯಲ್ಲಿ ‘ನಿತ್ಯಾ’ ಪಾತ್ರವನ್ನು ಅತ್ಯಂತ ಅದ್ಭುತವಾಗಿ ನಿಭಾಯಿಸುತ್ತಿದ್ದರು. ಕರ್ಣನ ವಿರುದ್ಧ ದ್ವೇಷ ಸಾಧಿಸುವ ಈ ಪಾತ್ರದಲ್ಲಿ ಅವರ ನಟನೆಗೆ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು.

ಆದರೆ, ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಮ್ರತಾ ಗೌಡ ಅವರು ವೈಯಕ್ತಿಕ ಅಥವಾ ಇನ್ಯಾವುದೋ ಕಾರಣಗಳಿಂದ ಧಾರಾವಾಹಿಯಿಂದ ಹೊರಬಂದಿದ್ದು, ಸದ್ಯದಲ್ಲೇ ಈ ಪಾತ್ರಕ್ಕೆ ಹೊಸ ನಟಿಯೊಬ್ಬರ ಆಗಮನವಾಗಲಿದೆ ಎಂದು ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.

ಇತ್ತೀಚಿನ ಎಪಿಸೋಡ್‌ಗಳ ಟ್ವಿಸ್ಟ್‌ಗಳ ಕಾರಣದಿಂದಾಗಿ ‘ನಿತ್ಯಾ’ ಪಾತ್ರದ ಮೇಲೆ ಕೆಲ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಅತಿಯಾದ ದ್ವೇಷ ಹಾಗೂ ನೆಗೆಟಿವ್ ಕಮೆಂಟ್‌ಗಳನ್ನು ಹಾಕುತ್ತಿದ್ದರು. ಈ ನೆಗೆಟಿವಿಟಿ ಕೇವಲ ಪಾತ್ರಕ್ಕೆ ಸೀಮಿತವಾಗದೇ ನಮ್ರತಾ ಗೌಡ ಮತ್ತು ಅವರ ತಾಯಿಯವರ ಮೇಲೂ ವೈಯಕ್ತಿಕ ದಾಳಿ ನಡೆಸುವ ಮಟ್ಟಿಗೆ ತಲುಪಿತ್ತು. ಈ ಬಗ್ಗೆ ನಟಿ ನಮ್ರತಾ ಈ ಹಿಂದೆ ತೀವ್ರ ಬೇಸರ ವ್ಯಕ್ತಪಡಿಸಿ, ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೂಡ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳೇ ಅವರು ಸೀರಿಯಲ್ ಬಿಡಲು ಕಾರಣ ಇರಬಹುದೇ ಎಂಬ ಪ್ರಶ್ನೆ ಈಗ ಅಭಿಮಾನಿಗಳನ್ನು ಕಾಡುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆಯಾದರೂ, ನಟಿ ನಮ್ರತಾ ಗೌಡ ಅವರಾಗಲಿ ಅಥವಾ ಜೀ ಕನ್ನಡ ವಾಹಿನಿಯಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಅಥವಾ ಸ್ಪಷ್ಟನೆ ನೀಡಿಲ್ಲ. ಹಾಗಾಗಿ, ನಿತ್ಯಾ ಪಾತ್ರಕ್ಕೆ ಹೊಸ ನಟಿ ಬರುವುದು ನಿಜವೇ ಅಥವಾ ಇದು ಬರೀ ವದಂತಿಯೇ ಎಂಬುದು ಮುಂಬರುವ ದಿನಗಳಲ್ಲಷ್ಟೇ ಸ್ಪಷ್ಟವಾಗಬೇಕಿದೆ.

Exit mobile version