ಬೆಂಗಳೂರು: ಭಾರತೀಯ ಕ್ರಿಕೆಟ್ ವಲಯದಲ್ಲಿ ಸದ್ಯ ದೊಡ್ಡದೊಂದು ಅಚ್ಚರಿಯ ಸುದ್ದಿ ಹೊರಬಿದ್ದಿದೆ. ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾಗೂ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದ ಆಂಧ್ರಪ್ರದೇಶ ಮೂಲದ ಕೆ.ಎಸ್. ಭರತ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ.
ಕೇವಲ 32ನೇ ವಯಸ್ಸಿಗೆ ನಿವೃತ್ತಿ ಪಡೆದಿರುವ ಕೆ.ಎಸ್. ಭರತ್, ಈಗ ಭಾರತ ತೊರೆದು ಯುಎಇ (UAE) ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಮುಂದಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಟೀಮ್ ಇಂಡಿಯಾದಲ್ಲಿ ನಿರಂತರವಾಗಿ ಅವಕಾಶಗಳು ಸಿಗದೇ ವಂಚಿತರಾಗಿದ್ದ ಕೆ.ಎಸ್. ಭರತ್ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ಕರಿಯರ್ ಮುಗಿಯಿತು ಎನ್ನುವಾಗಲೇ ತಮ್ಮ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ದುಬೈಗೆ ಹಾರಿದ್ದಾರೆ. ಸದ್ಯ ದುಬೈನಲ್ಲಿ ನೆಲೆಸಿರುವ ಭರತ್, ಯುಎಇ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.
ದುಬೈ ಟೂರ್ನಿಯಲ್ಲಿ ಅದೃಷ್ಟ ಪರೀಕ್ಷೆ:
ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಆಯೋಜಿಸುತ್ತಿರುವ ಸ್ಥಳೀಯ ವೈಟ್ ಬಾಲ್ ಪಂದ್ಯಾವಳಿಯಲ್ಲಿ ಭರತ್ ಕಣಕ್ಕಿಳಿದಿದ್ದು, ಇವರನ್ನು ‘ಸ್ಟಾಲಿಯನ್ಸ್’ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಜೂನ್ 19 ರಿಂದ ದುಬೈನ ಐಸಿಸಿ ಅಕಾಡೆಮಿ ಓವಲ್ನಲ್ಲಿ ಆರಂಭವಾಗಿರುವ ಈ ಟೂರ್ನಿಯಲ್ಲಿ ಒಟ್ಟು 4 ತಂಡಗಳು ಭಾಗವಹಿಸಿದ್ದು, 7 ಪಂದ್ಯಗಳು ನಡೆಯಲಿವೆ. ಇಲ್ಲಿ ಭರತ್ ತಮ್ಮ ಬ್ಯಾಟಿಂಗ್ ಹಾಗೂ ಕೀಪಿಂಗ್ ಧಮಾಕಾ ತೋರಿಸಲು ಸಜ್ಜಾಗಿದ್ದಾರೆ.
ಯುಎಇ ಪರ ಆಡಲು ಭರತ್ ನಿರ್ಧರಿಸಿದ್ದರೂ, ಅವರಿಗೆ ತಕ್ಷಣಕ್ಕೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಐಸಿಸಿ (ICC) ನಿಯಮಗಳು ಬಿಡುವುದಿಲ್ಲ. ಯಾವುದೇ ಒಬ್ಬ ಆಟಗಾರ ಪೂರ್ಣ ಸದಸ್ಯ ರಾಷ್ಟ್ರದಿಂದ (ಭಾರತ) ಅಸೋಸಿಯೇಟ್ ರಾಷ್ಟ್ರಕ್ಕೆ (ಯುಎಇ) ಸ್ಥಳಾಂತರಗೊಂಡರೆ, 3 ವರ್ಷಗಳ ಕೂಲಿಂಗ್-ಆಫ್ ಅವಧಿ (Cooling-off period) ಕಡ್ಡಾಯವಾಗಿರುತ್ತದೆ.
ಭರತ್ ಕೊನೆಯ ಬಾರಿಗೆ ಭಾರತದ ಪರ ಆಡಿದ್ದು 2024ರಲ್ಲಿ. ಹಾಗಾಗಿ, ಈ ಮೂರು ವರ್ಷಗಳ ನಿಯಮದ ಪ್ರಕಾರ ಅವರು 2027ರ ನಂತರವಷ್ಟೇ ಯುಎಇ ಪರ ಅಧಿಕೃತವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಅರ್ಹತೆ ಪಡೆಯಲಿದ್ದಾರೆ.
ಕೆ.ಎಸ್. ಭರತ್ ಅವರ ಐಪಿಎಲ್ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿ ವರ್ಷ ಅಂದರೆ ಅದು 2021. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇವರನ್ನು ಕೇವಲ 20 ಲಕ್ಷ ಬೇಸ್ ಪ್ರೈಸ್ಗೆ ಖರೀದಿಸಿತ್ತು. ಆ ಸೀಸನ್ನಲ್ಲಿ 3 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಭರತ್, ಆರ್ಸಿಬಿ ಮಧ್ಯಮ ಕ್ರಮಾಂಕಕ್ಕೆ ದೊಡ್ಡ ಬಲ ತುಂಬಿದರು.
2021ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲು ಕೊನೆಯ ಎಸೆತದಲ್ಲಿ 5 ರನ್ ಬೇಕಿತ್ತು. ಆವೇಶ್ ಖಾನ್ ಎಸೆದ ಕೊನೆಯ ಬಾಲ್ಗೆ ಭರತ್ ಸಿಕ್ಸರ್ ಬಾರಿಸಿ ಆರ್ಸಿಬಿಗೆ ರೋಮಾಂಚಕ ಜಯ ತಂದುಕೊಟ್ಟಿದ್ದರು. ಈ ಒಂದೇ ಒಂದು ಸಿಕ್ಸ್ ಇವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತ್ತು .
2021ರ ಅದ್ಭುತ ಪ್ರದರ್ಶನದ ಬಳಿಕ ಮೆಗಾ ಹರಾಜಿನಲ್ಲಿ ಇವರಿಗೆ ಭಾರಿ ಬೇಡಿಕೆ ಇತ್ತು. 2022 ಡೆಲ್ಲಿ ಕ್ಯಾಪಿಟಲ್ಸ್ ತಂಡ ಇವರನ್ನು 2 ಕೋಟಿ ರೂ. ನೀಡಿ ಖರೀದಿಸಿತು. ಆದರೆ ರಿಷಭ್ ಪಂತ್ ಇದ್ದ ಕಾರಣ ಇವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ (ಕೇವಲ 2 ಪಂದ್ಯ).
2023 ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಇವರನ್ನು 1.2 ಕೋಟಿ ರೂ.ಗೆ ಖರೀದಿಸಿತಾದರೂ, ವೃದ್ಧಿಮಾನ್ ಸಹಾ ಕೀಪಿಂಗ್ ಮಾಡುತ್ತಿದ್ದರಿಂದ ಭರತ್ಗೆ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್ ಸಿಗಲೇ ಇಲ್ಲ. 2024 ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇವರನ್ನು 50 ಲಕ್ಷ ರೂ.ಗೆ ತನ್ನದಾಗಿಸಿಕೊಂಡಿತು. ಆದರೆ ಅಲ್ಲಿಯೂ ಫಿಲ್ ಸಾಲ್ಟ್ ಅಬ್ಬರಿಸಿದ್ದರಿಂದ ಭರತ್ ಬೆಂಚ್ ಕಾಯಬೇಕಾಯಿತು.
ಕೆ.ಎಸ್. ಭರತ್ ಅವರಲ್ಲಿ ಪ್ರತಿಭೆಯಿದ್ದರೂ, ಐಪಿಎಲ್ನಲ್ಲಿ ಅವರಿಗೆ ನಿರಂತರವಾಗಿ ಅವಕಾಶಗಳು ಸಿಗಲಿಲ್ಲ. ಆರ್ಸಿಬಿ ತಂಡದಿಂದ ಹೊರಬಂದ ಮೇಲೆ ಅವರು ಹೋದ ಎಲ್ಲಾ ತಂಡಗಳಲ್ಲೂ (DC, GT, KKR) ಈಗಾಗಲೇ ಸೆಟಲ್ ಆಗಿದ್ದ ವಿಕೆಟ್ ಕೀಪರ್ಗಳು ಇದ್ದಿದ್ದರಿಂದ (ಪಂತ್, ಸಹಾ, ಸಾಲ್ಟ್) ಭರತ್ ಬಹುತೇಕ ಸಮಯವನ್ನು ಬೆಂಚ್ ಮೇಲೆಯೇ ಕಳೆಯಬೇಕಾಗಿ ಬಂದಿದ್ದು ಅವರ ಐಪಿಎಲ್ ಕರಿಯರ್ಗೆ ಹಿನ್ನಡೆಯಾಯಿತು.
