ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಅಪ್ರತಿಮ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೌಶಲ್ಯದಿಂದ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಸರ್ ಗಾರ್ಫೀಲ್ಡ್ ಸೋಬರ್ಸ್ (89) (Garry Sobers Death) ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ನಿಧನರಾಗಿದ್ದಾರೆ.
ಜುಲೈ 28 ರಂದು ತಮ್ಮ 90ನೇ ಜನ್ಮದಿನವನ್ನು ಆಚರಿಸಿ ಕೊಳ್ಳಬೇಕಾಗಿದ್ದ ಈ ಮಹಾನ್ ನಾಯಕ, ಅದಕ್ಕೂ 11 ದಿನ ಮುಂಚಿತವಾಗಿಯೇ ಇಹಲೋಕ ತ್ಯಜಿಸಿರುವುದು ಜಾಗತಿಕ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಆಘಾತ ಮತ್ತು ದುಃಖವನ್ನು ಉಂಟುಮಾಡಿದೆ.
1936ರಲ್ಲಿ ಬಾರ್ಬಡೋಸ್ನಲ್ಲಿ ಜನಿಸಿದ ಸೋಬರ್ಸ್, 1952ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪ್ರವೇಶ ಪಡೆದರು. ಕೇವಲ ಎರಡು ವರ್ಷಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅವರು, ವೆಸ್ಟ್ ಇಂಡೀಸ್ ತಂಡವನ್ನು ಸುದೀರ್ಘ ಅವಧಿಗೆ ಯಶಸ್ವಿಯಾಗಿ ಮುನ್ನಡೆಸಿದರು.
1968ರ ಇಂಗ್ಲೆಂಡ್ ಕೌಂಟಿ ಚಾಂಪಿಯನ್ಶಿಪ್ ಪಂದ್ಯದಲ್ಲಿ ಒಂದೇ ಓವರ್ನ ಸತತ ಆರು ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಜಗತ್ತಿನಲ್ಲಿ ಈ ಅಪರೂಪದ ಸಾಧನೆ ಮಾಡಿದ ಪ್ರಪ್ರಥಮ ಬ್ಯಾಟ್ಸ್ಮನ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು.
ತಮ್ಮ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 93 ಪಂದ್ಯಗಳನ್ನು ಆಡಿದ್ದ ಸೋಬರ್ಸ್, 57.78ರ ಅದ್ಭುತ ಸರಾಸರಿಯಲ್ಲಿ 26 ಶತಕಗಳ ನೆರವಿನೊಂದಿಗೆ 8,032 ರನ್ ಗಳಿಸಿದ್ದರು. ಇದರೊಂದಿಗೆ ಎಡಗೈ ವೇಗದ ಬೌಲಿಂಗ್ ಮೂಲಕ 235 ವಿಕೆಟ್ಗಳನ್ನು ಕಬಳಿಸಿ ಸಾರ್ವಕಾಲಿಕ ಅತ್ಯುತ್ತಮ ಆಲ್ರೌಂಡರ್ ಎನಿಸಿಕೊಂಡಿದ್ದರು.
ಮೈದಾನದಲ್ಲಿ ಅದ್ಭುತ ಫೀಲ್ಡಿಂಗ್ ಮೂಲಕ 109 ಅತ್ಯಾಕರ್ಷಕ ಕ್ಯಾಚ್ಗಳನ್ನು ಪಡೆದ ದಾಖಲೆಯೂ ಇವರ ಹೆಸರಿನಲ್ಲಿದೆ. ಅವರ ನಿಧನಕ್ಕೆ ಜಾಗತಿಕ ಕ್ರಿಕೆಟ್ ಮಂಡಳಿಗಳು ಸೇರಿದಂತೆ ಪ್ರಸ್ತುತ ಹಾಗೂ ಮಾಜಿ ಆಟಗಾರರು ಕಣ್ಣೀರಿನ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
west indies Legendry Cricketer Garry Sobers Death in 89
