ಬಂಟ್ವಾಳದ ಮಹಿಳೆಯನ್ನು ಡಿಜಿಟಲ್​ ಅರೆಸ್ಟ್​ ಮಾಡಿ ₹1.16 ಕೋಟಿ ವಂಚಿಸಿದ ಖದೀಮರು..!

Digital Arrest Scam: ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚಕರು ಡಿಜಿಟಲ್​ ಅರೆಸ್ಟ್​ ಎಂಬ ಜಾಲದ ಮೂಲಕ ಅಮಾಯಕರನ್ನು ವಂಚಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.

ಇದೇ ರೀತಿಯ ಪ್ರಕರಣವೊಂದು ಬಂಟ್ವಾಳದಲ್ಲಿಯೂ ಇದೀಗ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರಿಗೆ ವಾಟ್ಸಾಪ್​ ಕರೆ ಮಾಡಿದ ವಂಚಕರು ಆಕೆಗೆ ಬೆದರಿಕೆ ಹಾಕಿ ಬರೋಬ್ಬರಿ 1.16 ಕೋಟಿ ರೂಪಾಯಿ ವಂಚಿಸಿದ್ದು ಈ ಸಂಬಂಧ ಮಂಗಳೂರಿನ ಸೆನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್​ 24ರಂದು ಈ ಘಟನೆ ಸಂಭವಿಸಿದ್ದು ಮಹಿಳೆ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ಮುನ್ನೆಲೆಗೆ ಬಂದಿದೆ. ಮಹಿಳೆಯು ಮನೆಯಲ್ಲಿದ್ದ ಸಂದರ್ಭದಲ್ಲಿ ಟೆಲಿ ಕಮ್ಯೂನಿಕೇಷನ್​ ಡಿಪಾರ್ಟ್​ನಿಂದ ವಿಡಿಯೋ ಕಾಲ್​ ಮಾಡಿದ್ದೇವೆ ಎಂದು ವಂಚಕರು ನಂಬಿಸಿದ್ದರು.

ಬಳಿಕ ಮಹಿಳೆಗೆ ವಿಡಿಯೋ ಕಾಲ್​ ಮೂಲಕ ಬೆದರಿಕೆಯೊಡ್ಡಿದ್ದ ಸೈಬರ್​ ವಂಚಕರು ನಿಮ್ಮ ಹೆಸರಿನಲ್ಲಿರುವ ಆಧಾರ್​ ಕಾರ್ಡ್​ ಹಾಗೂ ಪಾನ್​ಕಾರ್ಡ್​ ಬಳಸಿ ಮೊಬೈಲ್​ ಸಿಮ್​ ಖರೀದಿ ಮಾಡಿ ದೆಹಲಿಯಲ್ಲಿ ಸಾರ್ವಜನಿಕರಿಗೆ ಜಾಹೀರಾತು ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂದು ನಂಬಿಸಿದ್ದಾರೆ.
ಬೇರೆ ಬೇರೆ ಮೊಬೈಲ್​ ಸಂಖ್ಯೆಯಿಂದ ಮಹಿಳೆಗೆ ವಿಡಿಯೋ ಕರೆ ಮಾಡುತ್ತಲೇ ಬಂದ ವಂಚಕರು ನಿಮ್ಮ ಮೇಲೆ ಕಾಂಬೋಡಿಯಾ ಮತ್ತು ಮಂಗೋಲಿಯಾ ದೇಶಗಳಿಗೆ ಮಕ್ಕಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳ ತನಿಖೆಗಾಗಿ ನಿಮ್ಮನ್ನು ಡಿಜಿಟಲ್​ ಅರೆಸ್ಟ್​ ಮಾಡಿದ್ದೇವೆ ಎಂದು ವಂಚಕರು ಮಹಿಳೆಗೆ ಬೆದರಿಸಿದ್ದರು.

ಇದನ್ನೂ ಓದಿ: ಬಹುಕೋಟಿ ವಂಚನೆ ಪ್ರಕರಣ : ಮಂಗಳೂರಿನ ರೋಷನ್ ಸಲ್ಮಾನರ ₹2.85 ಕೋಟಿ ಆಸ್ತಿ ಮುಟ್ಟುಗೋಲು

ಮಹಿಳೆಯನ್ನು ವಾಟ್ಸಾಪ್​ ಕರೆ ಮೂಲಕವೇ ಬಂಧಿಸಿದಂತೆ ನಟಿಸಿದ ವಂಚಕರು ಬಳಿಕ ತನಿಖೆ ಆರಂಭಿಸಿದ್ದರು. ತನಿಖೆಯ ಸಂದರ್ಭದಲ್ಲಿ ನೀವು ಹಣ ನೀಡಿದರೆ ನಿಮ್ಮನ್ನು ಈ ಕೇಸ್​ಗಳಿಂದ ಬಚಾವು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಹಣ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿದುಬಂದಿದೆ.

Exit mobile version