ಕನ್ನಡದ ನಟಿಯರಿಗೆ ಪರಭಾಷೆ ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳು ಸಿಗುತ್ತಿರುವುದು ಹೊಸದೇನಲ್ಲ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಶ್ರೀನಿಧಿ ಶೆಟ್ಟಿ, ಹಾಗೂ ರುಕ್ಮಿಣಿ ವಸಂತ್ ಅವರಂತಹ ನಟಿಯರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಆದರೆ, ಬಹುತೇಕ ನಟಿಯರಿಗೆ ಕಮರ್ಷಿಯಲ್ ಮಾಸ್ ಅಥವಾ ಗ್ಲಾಮರಸ್ ಪಾತ್ರಗಳಷ್ಟೇ ಸಿಗುತ್ತಿವೆ. ರಶ್ಮಿಕಾ ನಟನೆಯ 'ದಿ ಗರ್ಲ್‌ಫ್ರೆಂಡ್' ಚಿತ್ರವನ್ನು ಹೊರತುಪಡಿಸಿದರೆ, ನಾಯಕಿ ಪ್ರಾಧಾನ್ಯತೆಯ ಬಲವಾದ ಪಾತ್ರಗಳು ಸಿಕ್ಕಿದ್ದು ವಿರಳ. ಆದರೆ ಇದೀಗ ಕನ್ನಡದ ಬೆಡಗಿ ಭೂಮಿ ಶೆಟ್ಟಿ ಅವರಿಗೆ ತೆಲುಗಿನಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಪವರ್‌ಫುಲ್ ಪಾತ್ರವೊಂದು ಒಲಿದುಬಂದಿದೆ.
ತೆಲುಗಿನ ಜನಪ್ರಿಯ ಯುವ ನಿರ್ದೇಶಕ ಪ್ರಶಾಂತ್ ವರ್ಮಾ ಅವರ 'ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್' (PVCU) ಪರಿಕಲ್ಪನೆಯಡಿಯಲ್ಲಿ ಮೂಡಿಬರುತ್ತಿರುವ ‘ಮಹಾಕಾಳಿ’ ಪೌರಾಣಿಕ ಕಥಾಹಂದರದ ಸಿನಿಮಾದಲ್ಲಿ ಭೂಮಿ ಶೆಟ್ಟಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ವರ್ಮಾ ಖುದ್ದು ಕಥೆ ಬರೆದಿದ್ದು, ಕರ್ನಾಟಕ ಮೂಲದವರೇ ಆದ ಪೂಜಾ ಕೊಲ್ಲೂರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳಲ್ಲಿ ಭೂಮಿ ಶೆಟ್ಟಿ ಅವರ ಲುಕ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಕನ್ನಡದ 'ಇಕ್ಕಟ್' ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದ ಭೂಮಿ ಶೆಟ್ಟಿ, ಅದಕ್ಕೂ ಮುನ್ನ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಹಾಗೂ 2019ರ 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ತೆಲುಗಿನಲ್ಲಿ ವಿಜಯ್ ದೇವರಕೊಂಡ ಅಭಿನಯದ 'ಕಿಂಗ್‌ಡಮ್' ಹಾಗೂ 'ಷರತ್ತುಲು ವರತೀಸ್ತೆ' ಸಿನಿಮಾಗಳಲ್ಲಿ ನಟಿಸಿದ್ದ ಇವರಿಗೆ, 'ಮಹಾಕಾಳಿ' ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡುವ ನಿರೀಕ್ಷೆಯಿದೆ.
ಈ ಪೌರಾಣಿಕ ಸಾಹಸ ಸಿನಿಮಾದಲ್ಲಿ ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಖನ್ನಾ 'ವಿಶ್ವಾಮಿತ್ರ'ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಅಕ್ಷಯ್ ಖನ್ನಾ ಅವರನ್ನೊಳಗೊಂಡ ಹೊಸ ಪೋಸ್ಟರ್ ಅನ್ನು ‘ದಿ ಎಂಡ್ ಬಿಗಿನ್ಸ್’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದೆ. ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ ದುಗ್ಗಲ್ ಈ ನಿರ್ಮಾಣ ಮಾಡುತ್ತಿದ್ದು, ಸ್ಮರಣ್ ಸಾಯಿ ಸಂಗೀತ ನೀಡುತ್ತಿದ್ದಾರೆ. ಈ ಬೃಹತ್ ಕ್ಯಾನ್ವಾಸ್‌ನ ಸಿನಿಮಾವು 2027ರ ಸಂಕ್ರಾಂತಿ ಹಬ್ಬದಂದು ಜಾಗತಿಕವಾಗಿ ತೆರೆಗೆ ಬರಲಿದೆ.