ಅಂದು 'ಸೇಲ್ಸ್‌ಮನ್' ತರಹ ನೋಡಿದ್ದವರಿಗೆ ಇಂದು 'ಗ್ಲೋಬಲ್ ಸ್ಟಾರ್' ಯಶ್ ಉತ್ತರ

ಯಶ್ ಇಂದು ಕೇವಲ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲ, ಜಗತ್ತೇ ಕೊಂಡಾಡುವ ಗ್ಲೋಬಲ್ ಐಕಾನ್. ಆದರೆ, 'ಕೆಜಿಎಫ್' ಸಿನಿಮಾ ಬಿಡುಗಡೆಯ ವೇಳೆ ಬಾಲಿವುಡ್ ಅಂಗಳದಲ್ಲಿ ನಡೆದಿದ್ದ ಹೈಡ್ರಾಮಾ ಅಂತಿಂಥದ್ದಲ್ಲ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
yash toxic
yash toxic

ರಾಕಿಂಗ್ ಸ್ಟಾರ್ ಯಶ್ ಇಂದು ಕೇವಲ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲ, ಜಗತ್ತೇ ಕೊಂಡಾಡುವ ಗ್ಲೋಬಲ್ ಐಕಾನ್. ಆದರೆ, 'ಕೆಜಿಎಫ್' (KGF) ಸಿನಿಮಾ ಬಿಡುಗಡೆಯ ವೇಳೆ ಬಾಲಿವುಡ್ ಅಂಗಳದಲ್ಲಿ ನಡೆದಿದ್ದ ಹೈಡ್ರಾಮಾ ಅಂತಿಂಥದ್ದಲ್ಲ.

ಅಂದು ಕನ್ನಡ ಸಿನಿಜಗತ್ತಿನ 'ರಾಜಾಹುಲಿ'ಯಾಗಿ ಮಾತ್ರ ಮಿಂಚುತ್ತಿದ್ದ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿ, ಕೆಜಿಎಫ್ ಸಿನಿಮಾವನ್ನು ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ಗೆ ಕೊಂಡೊಯ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಲುಪಿಸಲು ಹೊರಟಾಗ ಎದುರಾದ ಅಡೆತಡೆಗಳು ಹಲವು. ಆ ದಿನಗಳ ಕಹಿ ಘಟನೆಗಳನ್ನು ಸ್ವತಃ ಯಶ್ ಅವರೇ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು.

ಬೇರೆ ಭಾಷೆಯ ಮಾರುಕಟ್ಟೆಗೆ ಕನ್ನಡದ ಸಿನಿಮಾವನ್ನು ತೆಗೆದುಕೊಂಡು ಹೋದಾಗ ಆರಂಭದಲ್ಲಿ ಸುಲಭವಾಗಿರಲಿಲ್ಲ.

"ನಾವು ಕೆಜಿಎಫ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡೋಣ ಅಂತ ಹೋದಾಗ ನಮ್ಮನ್ನ ಕೇಳೋರೇ ಇರ್ಲಿಲ್ಲ. ಕ್ರೆಡಿಟ್ ಕಾರ್ಡ್‌ನವ್ರು ಅಥವಾ ಸೇಲ್ಸ್‌ಮನ್ಸ್‌ ಬಂದ್ರೆ ಜನರು 'ಏ ನಮ್ಮ ಹತ್ರನೇ ಎಲ್ಲಾ ಇದೆ' ಅನ್ನೋ ಥರ ಆಡ್ತಾರಲ್ಲ ಹಾಗೆ ಟ್ರೀಟ್ ಮಾಡಿದ್ರು. 'ಇರ್ಲಿ ಮೊದ್ಲು ನಾವ್ ಹೇಳೋದನ್ನ ಕೇಳ್ರಯ್ಯಾ' ಅಂದ್ರೆ ಯಾರೂ ರೆಡಿ ಇರ್ಲಿಲ್ಲ. ಕನ್ನಡ ಇಂಡಸ್ಟ್ರಿ ಅಂದ್ರೆ ಅವರಿಗೆ ಆ ರೀತಿಯ ಫೀಲ್ ಇತ್ತು. ಬಟ್, ನಾವು ಎಲ್ಲರನ್ನೂ ಅಟ್ರಾಕ್ಟ್ ಮಾಡಿ, ಹೊಡೆದು ಎತ್ಕೊಂಡ್ ಬಂದ್ಮೇಲೆ, 'ಇವತ್ತು ನಮ್ಗೆ ಮೆಂಬರ್‌ಶಿಪ್ ಬೇಕು' ಅಂತಾರಲ್ಲ, ಹಾಗೆ ಎಲ್ಲಾ ಬಂದು ಕೇಳ್ತಾರೆ."

ಕೆಜಿಎಫ್ ಬಿಡುಗಡೆಯಾದ ಮೊದಲ ದಿನವೇ ಯಶ್ ಇದನ್ನು 'ಪ್ರೈಡ್ ಆಫ್ ಕರ್ನಾಟಕ' ಎಂದು ಘೋಷಿಸಿದ್ದರು.. "ಇವನ ಸಿನಿಮಾ, ಅದಕ್ಕೇ ಹೀಗೆಲ್ಲಾ ಬಿಲ್ಡಪ್ ಕೊಡ್ತಾನೆ" ಎಂದು ವ್ಯಂಗ್ಯವಾಡಿದವರೇ ಹೆಚ್ಚು. ಆದರೆ, ನಿಜವಾಗಿಯೂ ಅದು ಕರ್ನಾಟಕದ ಹೆಮ್ಮೆಯಾಗಿ ಹೊರಹೊಮ್ಮಿತು. ಕನ್ನಡ ಸಿನಿಮಾಗೆ ಪರಭಾಷೆಯಲ್ಲಿ ಮನ್ನಣೆ ಸಿಗಬೇಕು, ಬೇರೆಯವರು ನಮ್ಮನ್ನು ಗೌರವಿಸಬೇಕು ಮತ್ತು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು ಎಂಬ ಪ್ರತಿಯೊಬ್ಬ ಕನ್ನಡಿಗನ ಕನಸನ್ನು ಆ ಸಿನಿಮಾ ನನಸು ಮಾಡಿತ್ತು.

ಕೆಜಿಎಫ್ ಮೂಲಕ ಕನ್ನಡ ಸಿನಿಮಾವನ್ನು ಪ್ಯಾನ್ ಇಂಡಿಯಾ ಹಂತಕ್ಕೆ ಕೊಂಡೊಯ್ದಿದ್ದ ಯಶ್, ಇಂದು ಅದೇ ಕನ್ನಡ ಸಿನಿಮಾವನ್ನು ಹಾಲಿವುಡ್ ಮಟ್ಟ ಮೀರಿ 'ಜಾಗತಿಕ ವೇದಿಕೆಗೆ' (International Platform) ಕೊಂಡೊಯ್ದಿದ್ದಾರೆ. ಗೀತೂ ಮೋಹನ್‌ದಾಸ್ ನಿರ್ದೇಶನದ, ಯಶ್ ನಾಯಕತ್ವದ 'ಟಾಕ್ಸಿಕ್' (Toxic) ಸಿನಿಮಾ ಇಂದು ಪ್ರಪಂಚದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇಡೀ ಜಗತ್ತೇ ಈ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದೆ.

ಯಶ್ ತಮ್ಮ ಕನಸುಗಳನ್ನು ಕೆಜಿಎಫ್ ಹಾಗೂ ಟಾಕ್ಸಿಕ್ ಮೂಲಕ ಹಂತ ಹಂತವಾಗಿ ಈಡೇರಿಸಿಕೊಳ್ಳುತ್ತಿದ್ದಾರೆ. ಅವರ ಮನದಲ್ಲಿ ಇನ್ನೆಷ್ಟು ದೊಡ್ಡ ಕನಸುಗಳಿವೆಯೋ, ಅವೆಲ್ಲವನ್ನೂ ನನಸು ಮಾಡುವ ಪ್ರತಿಭೆ ಮತ್ತು ಪಕ್ಕಾ ಪ್ಲಾನ್ ನಮ್ಮ ರಾಕಿಂಗ್ ಸ್ಟಾರ್ ಬಳಿ ಇದೆ. ನಾವೆಲ್ಲರೂ ಆ ಯಶಸ್ಸನ್ನು ನೋಡಿ, ಸಂಭ್ರಮಿಸಿ, ಹೆಮ್ಮೆ ಪಡಲು ಸಜ್ಜಾಗಬೇಕಿದೆ!

Topics

ಸಂಬಂಧಿತ ಸುದ್ದಿಗಳು