News Next Kannada

entertainment

"ಕನಸಿನಲ್ಲಿ ಬಂದು ತಬ್ಬಿಕೊಂಡಿದ್ದ" ಸುಶಾಂತ್ ಸಿಂಗ್: ಭಾವುಕರಾದ ಸಹೋದರಿ ಶ್ವೇತಾ, ಧೋನಿ ವಿರುದ್ಧ ಬೇಸರ!

ಟ ಸುಶಾಂತ್ ಸಿಂಗ್ ರಜಪೂತ್ ಅಗಲಿ ಆರು ವರ್ಷಗಳು ಕಳೆದಿದ್ದರೂ, ಅವರ ಸಾವಿನ ಸುತ್ತಲಿನ ನಿಗೂಢತೆ ಮತ್ತು ನೆನಪುಗಳು ಅಭಿಮಾನಿಗಳನ್ನು ಹಾಗೂ ಕುಟುಂಬಸ್ಥರನ್ನು ಇಂದಿಗೂ ಕಾಡುತ್ತಲೇ ಇವೆ

By Meghana Pranuth | ಮೇಘನಾ ಪ್ರಣೂತ್‌
SUSHANT SIGH

ಬಾಲಿವುಡ್‌ನ ಭರವಸೆಯ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿ ಆರು ವರ್ಷಗಳು ಕಳೆದಿದ್ದರೂ, ಅವರ ಸಾವಿನ ಸುತ್ತಲಿನ ನಿಗೂಢತೆ ಮತ್ತು ನೆನಪುಗಳು ಅಭಿಮಾನಿಗಳನ್ನು ಹಾಗೂ ಕುಟುಂಬಸ್ಥರನ್ನು ಇಂದಿಗೂ ಕಾಡುತ್ತಲೇ ಇವೆ. ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಒಂದರಲ್ಲಿ ಭಾಗವಹಿಸಿದ್ದ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ತಮ್ಮ ಸಹೋದರನ ನೆನಪುಗಳನ್ನು ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಂಡ ಶ್ವೇತಾ, ಸುಶಾಂತ್ ಇಂದಿಗೂ ತಮ್ಮ ಕನಸಿನಲ್ಲಿ ಬಂದು ಮಾತನಾಡುತ್ತಾರೆ ಎಂದಿದ್ದಾರೆ.

"ಸುಶಾಂತ್ ಚಿತಾಭಸ್ಮ ವಿಸರ್ಜನೆಗಾಗಿ ನಾವು ಪಾಟ್ನಾಕ್ಕೆ ತೆರಳಿದ್ದಾಗ, ಅವರ ಚಿತಾಭಸ್ಮವನ್ನು ನನ್ನ ರೂಮಿನಲ್ಲೇ ಇಡಲಾಗಿತ್ತು. ಆ ರಾತ್ರಿ ಮಲಗಿದ್ದಾಗ ಸುಶಾಂತ್ ನನ್ನ ಮುಂದೆ ಬಂದರು. ಗಂಟೆಗಟ್ಟಲೆ ನನ್ನ ಜೊತೆ ಮಾತನಾಡಿದರು. ನನ್ನಲ್ಲಿದ್ದ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸಿದರು.

ನನ್ನನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟರು! ಅವರ ಉಸಿರು ಮತ್ತು ವಾಸನೆಯನ್ನು ನಾನು ಪ್ರತ್ಯಕ್ಷವಾಗಿ ಅನುಭವಿಸಿದೆ. ಆ ಕ್ಷಣ ನನಗೆ ದೊಡ್ಡ ಆತ್ಮಸ್ಥೈರ್ಯ ನೀಡಿತು," ಎಂದು ಶ್ವೇತಾ ಭಾವುಕರಾದರು.

ಸುಶಾಂತ್ ಅಗಲಿದ ಸುದ್ದಿ ತಿಳಿದ ಕ್ಷಣವನ್ನು ನೆನೆದ ಶ್ವೇತಾ, "ಆ ಸಮಯದಲ್ಲಿ ನಾನು ಕ್ಯಾಲಿಫೋರ್ನಿಯಾದಲ್ಲಿದ್ದೆ. ಸುದ್ದಿ ಕೇಳಿ ದೇಹವೇ ಜಡವಾಯಿತು. ಆ ಬಳಿಕ ಗಟ್ಟಿಯಾಗಿ ಕಿರುಚಿ ಅತ್ತೆ. ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ನನಗೆ ತಕ್ಷಣ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ನನ್ನ ಪ್ರೀತಿಯ ಸಹೋದರನಿಗೆ ಕೊನೆಯ ವಿದಾಯ ಹೇಳಲು ಸಾಧ್ಯವಾಗಲಿಲ್ಲವಲ್ಲ ಎಂಬ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ," ಎಂದಿದ್ದಾರೆ.

ಧೋನಿ ನಡೆಗೆ ಶ್ವೇತಾ ಸಿಂಗ್ ಬೇಸರ!

ಎಂ.ಎಸ್. ಧೋನಿ ಅವರ ಜೀವನಾಧಾರಿತ 'ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಸಿನಿಮಾ ಸುಶಾಂತ್ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು. ಆದರೆ, ಸುಶಾಂತ್ ನಿಧನದ ನಂತರ ಕ್ರಿಕೆಟರ್ ಧೋನಿ ನಡೆದುಕೊಂಡ ರೀತಿಯ ಬಗ್ಗೆ ಶ್ವೇತಾ ಬೇಸರ ವ್ಯಕ್ತಪಡಿಸಿದ್ದಾರೆ.

"ಸುಶಾಂತ್ ಮರಣದ ನಂತರ ಕಂಗನಾ ರನೌತ್ ಸೇರಿದಂತೆ ಹಲವು ಚಿತ್ರರಂಗದ ಪ್ರಮುಖರು ನಮಗೆ ಕರೆ ಮಾಡಿ ಧೈರ್ಯ ತುಂಬಿದರು. ಆದರೆ, ಧೋನಿ ಮಾತ್ರ ನಮ್ಮ ಕುಟುಂಬವನ್ನು ಒಮ್ಮೆಯೂ ಸಂಪರ್ಕಿಸಲಿಲ್ಲ," ಎಂದು ಶ್ವೇತಾ ಹೇಳಿಕೊಂಡಿದ್ದಾರೆ.