ಮಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ವಿಶ್ವಾದ್ಯಂತ ಸಿನಿಮಾ ಅದ್ಧೂರಿಯಾಗಿ ತೆರೆಕಾಣಲಿರುವ ಹಿನ್ನೆಲೆಯಲ್ಲಿ ನಟ ಯಶ್ ಅವರು ಕರಾವಳಿಯ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟ ಯಶ್ ಅವರನ್ನು ಅಭಿಮಾನಿಗಳು ಹಾಗೂ ಎನ್‌ಎಸ್‌ಯುಐ (NSUI) ಅಧ್ಯಕ್ಷ ಸುಹಾನ್ ಆಳ್ವ ನೇತೃತ್ವದ ಮುಖಂಡರು ಪುಷ್ಪಗುಚ್ಛ ನೀಡಿ, ಜೈಕಾರ ಕೂಗಿ ಅದ್ಧೂರಿಯಾಗಿ ಬರಮಾಡಿಕೊಂಡರು.
ತಮ್ಮ ಪ್ರತಿಯೊಂದು ಸಿನಿಮಾ ಬಿಡುಗಡೆಗೂ ಮುನ್ನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆಯುವ ಸಂಪ್ರದಾಯವನ್ನು ಯಶ್ ಈ ಬಾರಿಯೂ ಮುಂದುವರಿಸಿದ್ದಾರೆ. ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಮಣ್ಣಿನ ಹರಕೆಗೆ ಪ್ರಸಿದ್ಧಿ ಪಡೆದಿರುವ ಖ್ಯಾತ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಮಣ್ಣಿನ ಹರಕೆ ಅರ್ಪಿಸಲಿದ್ದಾರೆ.
ಕ್ಷೇತ್ರಗಳ ಭೇಟಿ ಹಾಗೂ ಪೂಜಾ ಕಾರ್ಯಕ್ರಮಗಳು ಮುಗಿದ ತಕ್ಷಣವೇ ಯಶ್ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಸಂಜೆ 4 ಗಂಟೆಗೆ ನೇರವಾಗಿ ಕೇರಳದ ಕೊಚ್ಚಿಗೆ ತೆರಳಲಿದ್ದು, ಅಲ್ಲಿ ನಡೆಯಲಿರುವ 'ಟಾಕ್ಸಿಕ್' ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಬೃಹತ್ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಳೆ ತೆರೆಕಾಣಲಿರುವ ಈ ಸಿನಿಮಾ ವಿಶ್ವದಾದ್ಯಂತ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎಂದು ಕಾದುನೋಡಬೇಕಿದೆ.