ಮುಟ್ಟು ಅನ್ನೋದು ಪ್ರಕೃತಿ ಹೆಣ್ಣಿಗೆ ನೀಡಿದ ಪವಿತ್ರ ಸೃಷ್ಟಿಯ ಶಕ್ತಿ. ತೀವ್ರ ದೇಹದಂಡನೆ, ಮೂಳೆ ಸವೆಯುವ ನೋವು ಮತ್ತು ಮನಸ್ಸಿನ ಏರಿಳಿತಗಳನ್ನು ನಿಶ್ಯಬ್ದವಾಗಿ ತಡೆದುಕೊಳ್ಳುತ್ತಲೇ, ಆಕೆ ಕುಟುಂಬದ ಜವಾಬ್ದಾರಿಯನ್ನು ಹಸನ್ಮುಖಿಯಾಗಿ ನಿಭಾಯಿಸುತ್ತಾಳೆ. ಪ್ರತಿಯೊಬ್ಬ ಹೆಣ್ಣಿನ ತ್ಯಾಗ, ಸಹನೆಯ ಹೆಣ್ಣು ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಕುಟುಂಬವೇ ಸಾಥ್ ಕೊಡಬೇಕು. ಮುಟ್ಟಿನ ಸಮಯದಲ್ಲಿ ಆಕೆ ಅನುಭವಿಸುವ ಯಾತನೆ ಎಂತಹದ್ದು, ಮಾನಸಿಕ ಆಲಸ್ಯ ಕಾಡುವುದು ಯಾಕೆ ? ಅದರಿಂದ ಹೊರಲು ಸರಳ ಪರಿಹಾರವೇನು ಅನ್ನೋ ಮಾಹಿತಿ ಇಲ್ಲಿದೆ.
ಮುಟ್ಟಿನ (Periods) ದಿನಗಳಲ್ಲಿ ಕೇವಲ ದೈಹಿಕ ನೋವು ಅಥವಾ ಆಯಾಸ ಮಾತ್ರವಲ್ಲ, ಹೆಚ್ಚಿನ ಮಹಿಳೆಯರಲ್ಲಿ ಮಾನಸಿಕ ಮಂದತೆ, ಆತಂಕ, ಕಿರಿಕಿರಿ, ಏಕಾಗ್ರತೆಯ ಕೊರತೆ ಹಾಗೂ ಸಣ್ಣಪುಟ್ಟ ವಿಷಯಗಳನ್ನು ಮರೆಯುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಮನಸ್ಸು ಮತ್ತು ದೇಹ ಎರಡೂ ಭಾರಿ ಆಯಾಸಕ್ಕೆ ಒಳಗಾಗಲು ಮುಖ್ಯವಾದ ಕಾರಣಗಳು ಮತ್ತು ಅವುಗಳಿಂದ ಹೊರಬರಲು ಸರಳ ಉಪಾಯಗಳು ಇಲ್ಲಿವೆ.
ಮುಟ್ಟಿನ ಸಮಯದಲ್ಲಿ ಮಾನಸಿಕ ಆಲಸ್ಯ ಕಾಡಲು ಮುಖ್ಯ ಕಾರಣಗಳು
1. ಹಾರ್ಮೋನ್‌ಗಳ ಏರಿಳಿತ (Hormonal Fluctuations):
ಮುಟ್ಟು ಆರಂಭವಾಗುವ ಕೆಲವು ದಿನಗಳ ಮೊದಲು ಮತ್ತು ಮುಟ್ಟಿನ ಅವಧಿಯಲ್ಲಿ ದೇಹದಲ್ಲಿ ಈಸ್ಟ್ರೋಜೆನ್ (Estrogen) ಹಾಗೂ ಪ್ರೊಜೆಸ್ಟರಾನ್ (Progesterone) ಹಾರ್ಮೋನ್‌ಗಳ ಮಟ್ಟ ಗಣನೀಯವಾಗಿ ಕುಸಿಯುತ್ತದೆ. ಈಸ್ಟ್ರೋಜೆನ್ ಹಾರ್ಮೋನ್ ಮೆದುಳಿನ ಸಕ್ರಿಯತೆ ಮತ್ತು ಮನಸ್ಸಿನ ಪ್ರಸನ್ನತೆಗೆ ಕಾರಣವಾಗುವ ಸೆರೊಟೋನಿನ್ (Serotonin) ಎಂಬ ರಾಸಾಯನಿಕದ ಮೇಲೆ ನೇರ ಪ್ರಭಾವ ಬೀರುತ್ತದೆ. ಈಸ್ಟ್ರೋಜೆನ್ ಮಟ್ಟ ತಗ್ಗಿದಾಗ ಸೆರೊಟೋನಿನ್ ಪ್ರಮಾಣವೂ ಕಡಿಮೆಯಾಗಿ ಮಾನಸಿಕ ಆಲಸ್ಯ ಉಂಟಾಗುತ್ತದೆ.
2. ರಕ್ತಹೀನತೆ ಮತ್ತು ಕಬ್ಬಿನಾಂಶದ (Iron) ಕೊರತೆ
ಮುಟ್ಟಿನ ಸಮಯದಲ್ಲಿ ಆಗುವ ರಕ್ತಸ್ರಾವದಿಂದಾಗಿ ದೇಹದಲ್ಲಿ ಕಬ್ಬಿನಾಂಶದ ಮಟ್ಟ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಐರನ್ ಕೊರತೆಯಾದಾಗ ಮೆದುಳು ಹಾಗೂ ದೇಹದ ಇತರೆ ಅಂಗಾಂಶಗಳಿಗೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕವನ್ನು (Oxygen) ತಲುಪಿಸುವ ಹಿಮೋಗ್ಲೋಬಿನ್ ಕೊರತೆಯಾಗಿ ದೈಹಿಕ ಮತ್ತು ಮಾನಸಿಕ ಆಯಾಸ ಹೆಚ್ಚಾಗುತ್ತದೆ.
3. ನಿದ್ರಾಹೀನತೆ (Sleep Disturbances
ಹೊಟ್ಟೆನೋವು, ಬೆನ್ನುನೋವು, ಕಾಲುಸೆಳೆತ ಹಾಗೂ ದೇಹದ ತಾಪಮಾನದಲ್ಲಿ ಆಗುವ ವ್ಯತ್ಯಾಸಗಳಿಂದಾಗಿ ರಾತ್ರಿ ವೇಳೆಯಲ್ಲಿ ಮಹಿಳೆಯರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ ನಿದ್ರೆ ಪೂರ್ಣಗೊಳ್ಳದ ಕಾರಣದಿಂದಾಗಿ ಅವರು ಹಗಲಿನಲ್ಲಿ ಮಾನಸಿಕವಾಗಿ ಮಂದತೆ, ತಲೆಭಾರ, ಸುಸ್ತು ಕಾಡುವುದು ಸಹಜ.
ಮುಟ್ಟಿನಿಂದ ಮಾನಸಿಕ ಆಲಸ್ಯ : ಹೊರಬರಲು ಸರಳ ಪರಿಹಾರ
1. ಸ್ವಯಂ ಜಾಗೃತಿ (Self-Awareness)
ಇದು ತಾತ್ಕಾಲಿಕ ಅನ್ನೋದು ನೆನಪಿರಲಿ : ನಿಮ್ಮ ಕೋಪ, ಮಾನಸಿಕ ಕಿರಿಕಿರಿ, ದುಃಖಕ್ಕೆ ಹಾರ್ಮೋನ್‌ಗಳ ಏರಿಳಿತವೇ ಕಾರಣ ಅನ್ನೋದು ನೆನಪಿಡಿ. ಇದು ಕೇವಲ 2 ರಿಂದ3 ದಿನಗಳ ವರೆಗೆ ಮಾತ್ರವೇ ಇರುತ್ತದೆ ಅನ್ನೋದನ್ನು ಮನಸಿಗೆ ನೆನಪು ಮಾಡಿಸಿ.
ನಿಮ್ಮ ಭಾವನೆಗಳನ್ನು ಸ್ವೀಕರಿಸಿ: ಆ ಸಮಯದಲ್ಲಿ ಕಿರಿಕಿರಿ ಅನಿಸಿದರೆ ಕೋಪಿಸಿಕೊಳ್ಳಬೇಡಿ. “ಈ ಸಮಯದಲ್ಲಿ ಈ ರೀತಿ ಅನಿಸುವುದು ಸಾಮಾನ್ಯ” ಎಂದು ನಿಮ್ಮನ್ನು ನೀವು ಸಮಾಧಾನಪಡಿಸಿಕೊಳ್ಳಿ.
2. ಶ್ವಾಸಕ್ರಿಯೆ ಮತ್ತು ಧ್ಯಾನ (Breathing & Meditation)
ಆಳವಾದ ಉಸಿರಾಟ (Deep Breathing): ತೀವ್ರ ಕಿರಿಕಿರಿ ಅಥವಾ ಕೋಪ ಬಂದಾಗ, ತಕ್ಷಣವೇ ಕಣ್ಣು ಮುಚ್ಚಿ 4 ಸೆಕೆಂಡುಗಳ ಕಾಲ ಉಸಿರನ್ನು ಒಳಗೆ ತೆಗೆದುಕೊಂಡು, 4 ಸೆಕೆಂಡು ಹಿಡಿದಿಟ್ಟು, ನಂತರ ನಿಧಾನವಾಗಿ ಹೊರಬಿಡಿ. ಇದನ್ನು 5-10 ಬಾರಿ ಮಾಡುವುದರಿಂದ ಮೆದುಳಿಗೆ ತಕ್ಷಣ ಶಾಂತಿ ಸಿಗುತ್ತದೆ.
10 ನಿಮಿಷಗಳ ಧ್ಯಾನ: ಬೆಳಿಗ್ಗೆ ಅಥವಾ ರಾತ್ರಿ ಮಲಗುವ ಮುನ್ನ ಪ್ರಶಾಂತವಾದ ಜಾಗದಲ್ಲಿ ಕುಳಿತು ಧ್ಯಾನ ಮಾಡುವುದು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡುತ್ತದೆ.
3. ನಿಮ್ಮ ಇಷ್ಟದ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ
ಆತ್ಮೀಯರ ಜೊತೆ ಹಂಚಿಕೊಳ್ಳಿ: ಮುಟ್ಟಿನ ಮೊದಲು ಅಥವಾ ಮುಟ್ಟಿನ ದಿನಗಳಂದು ನೀವು ಒಬ್ಬಂಟಿಯಾಗಿ ಇರುವುದಕ್ಕೆ ಬಯಸಬೇಡಿ. ಹೀಗೆ ಮಾಡಿದ್ರೆ ನಿಮ್ಮನ್ನು ಇನ್ನಷ್ಟು ಕುಗ್ಗಿಸುತ್ತದೆ. ಕುಟುಂಬದವರು ಅಥವಾ ನಿಮ್ಮ ಪ್ರೀತಿ ಪಾತ್ರರರ ಜೊತೆಗೆ ಸಮಯ ಕಳೆಯಿರಿ. ಆರಂಭದಲ್ಲಿ ಕಿರಿಕಿರಿ ಅನಿಸಿದ್ರೂ ಮನಸಿನ ಭಾವನೆ ಹೇಳಿಕೊಳ್ಳಿ. ಇದರಿಂದ ಮನಸಿನ ಭಾರ ಕಡಿಮೆ ಆಗುತ್ತದೆ.
ಸಂಗೀತ ಮತ್ತು ಪುಸ್ತಕಗಳು: ಒಂದೊಮ್ಮೆ ನಿಮಗೆ ಪುಸ್ತಕ ಓದುವ ಅಭ್ಯಾಸ ಇದ್ರೆ ಉತ್ತಮ ಪುಸ್ತಕಗಳನ್ನು ಈ ಸಮಯದಲ್ಲಿ ಓದಿ. ಸಂಗೀತ ಆಲಿಸುವ ಅಭ್ಯಾಸ ಇದ್ರೆ ನಿಮ್ಮಿಷ್ಟದ ಹಾಡುಗಳನ್ನು ಆಲಿಸಿ. ಇದರಿಂದ ನಿಮ್ಮ ಮನಸಿನ ಭಾರ ಕಡಿಮೆ ಆಗಲಿದೆ.
ವಿಶ್ರಾಂತಿಗೆ ಆದ್ಯತೆ : ಎಡೆಬಿಡದೆ ಕೆಲಸ ಮಾಡುವ ನೀವು, ಮುಟ್ಟಿನ ಮೊದಲು ಜೊತೆಗೆ ಮುಟ್ಟಿನ ದಿನಗಳಂದು ಸಾಕಷ್ಟು ವಿಶ್ರಾಂತಿಯನ್ನು ಪಡೆಯಿರಿ. ಒತ್ತಡದ ಕೆಲಸ ಕಾರ್ಯಗಳನ್ನು ನೀವು ಮುಟ್ಟಿನ ದಿನಗಳಲ್ಲಿ ಮುಂದೂಡುವುದು ಬಹಳ ಒಳಿತು.
4. ದೈಹಿಕ ಜಾಗ್ರತೆ (Physical Care)
ಉಗುರುಬೆಚ್ಚಗಿನ ನೀರು: ಬಿಸಿ ನೀರಿನ ಸ್ನಾನ ಮಾಡುವುದು ಅಥವಾ ಹೊಟ್ಟೆಗೆ ಬಿಸಿನೀರಿನ ಚೀಲ (Heating Pad) ಇಟ್ಟುಕೊಳ್ಳುವುದರಿಂದ ದೈಹಿಕ ನೋವು ಶಮನವಾಗಿ ಮನಸ್ಸು ಹಗುರವಾಗುತ್ತದೆ.
ಹಗುರವಾದ ವಾಕಿಂಗ್: 15-20 ನಿಮಿಷಗಳ ಕಾಲ ಪ್ರಕೃತಿಯ ಮಡಿಲಿನಲ್ಲಿ ಹಗುರವಾದ ನಡಿಗೆ ಮಾಡುವುದರಿಂದ ದೇಹದಲ್ಲಿ ‘ಎಂಡಾರ್ಫಿನ್’ (ಖುಷಿ ಕೊಡುವ ಹಾರ್ಮೋನ್) ಬಿಡುಗಡೆಯಾಗುತ್ತದೆ. ಇದರಿಂದಾಗಿ ನಿಮ್ಮ ಮನಸ್ಸು ಹಗುರವಾಗುತ್ತದೆ.
ಹಗುರವಾದ ವ್ಯಾಯಾಮ: ಯೋಗ, ಧ್ಯಾನ ಅಥವಾ ಹಗುರವಾದ ವಾಕಿಂಗ್ ಮಾಡುವುದರಿಂದ ಮೆದುಳಿಗೆ ಆಮ್ಲಜನಕದ ಪೂರೈಕೆ ಹೆಚ್ಚುತ್ತದೆ. ಇದು ದೇಹದಲ್ಲಿ ‘ಎಂಡಾರ್ಫಿನ್’ (ಖುಷಿ ಕೊಡುವ ಹಾರ್ಮೋನ್) ಬಿಡುಗಡೆ ಮಾಡಿ ಮನಸ್ಸನ್ನು ಸಕ್ರಿಯಗೊಳಿಸುತ್ತದೆ.
ಉತ್ತಮ ವಿಶ್ರಾಂತಿ ಮತ್ತು ನಿದ್ರೆ: ಮುಟ್ಟಿನ ಮೊದಲು ಅಥವಾ ಮುಟ್ಟಿನ ದಿನಗಳಂದು ದೇಹ ಮತ್ತು ಮನಸ್ಸಿಗೆ ಕನಿಷ್ಠ 7-8 ಗಂಟೆಗಳ ಕಾಲ ಅಡಚಣೆಯಿಲ್ಲದ ವಿಶ್ರಾಂತಿ ನೀಡುವುದು ಅತೀ ಅಗತ್ಯ.
5. ಆಹಾರ ಮತ್ತು ಕೆಫೀನ್ ನಿಯಂತ್ರಣ
ಪೌಷ್ಟಿಕ ಆಹಾರ ಸೇವನೆ: ದೇಹಕ್ಕೆ ಐರನ್ ಮತ್ತು ವಿಟಮಿನ್‌ಗಳನ್ನು ಒದಗಿಸುವ ಪಾಲಕ್, ಬೀಟ್‌ರೂಟ್, ಹಸಿರು ತರಕಾರಿಗಳು, ಹಣ್ಣುಗಳು ಹಾಗೂ ಒಣಹಣ್ಣುಗಳನ್ನು ಆಹಾರದಲ್ಲಿ ಸೇರಿಸಿ.
ಸಾಕಷ್ಟು ನೀರು ಕುಡಿಯಿರಿ: ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ (Dehydration) ಮಾನಸಿಕ ಆಲಸ್ಯ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಟೀ/ಕಾಫಿ ಕಡಿಮೆ ಮಾಡಿ: ಈ ಸಮಯದಲ್ಲಿ ನೀವು ಹೆಚ್ಚು ಕಾಫಿ ಅಥವಾ ಚಹಾ ಕುಡಿಯುವುದರಿಂದ ಆತಂಕ (Anxiety) ಮತ್ತು ನಿದ್ರಾಹೀನತೆ ಹೆಚ್ಚಾಗಬಹುದು. ಹೀಗಾಗಿ ನೀವು ಕಾಫಿ ಅಥವಾ ಟೀಯನ್ನು ಈ ವೇಳೆಯಲ್ಲಿ ಸ್ಕಿಪ್ ಮಾಡಿದ್ರೆ ಬಹಳ ಉತ್ತಮ.
ಸಕ್ಕರೆ ಪ್ರಮಾಣ ಕಡಿಮೆ ಮಾಡಿ : ಅತಿಯಾದ ಸಿಹಿಯ ಅಂಶ ಕೂಡ ನಿಮ್ಮ ಮೂಡ್ ಹಾಳಾಗುವಂತೆ ಮಾಡುತ್ತದೆ. ಸಿಹಿ ಪದಾರ್ಥಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರ್ ಏರಿಕೆ- ಇಳಿಕೆಯಾಗುತ್ತದೆ. ಹೀಗಾಗಿ ಸಿಹಿ ಪದಾರ್ಥಗಳನ್ನು ಈ ವೇಳೆ ಅವಾಯ್ಡ್ ಮಾಡಿ. ಬದಲಿಗೆ ಪೋಷಕಾಂಶ ಇರುವ ಹಣ್ಣು, ಒಣ ಹಣ್ಣುಗಳನ್ನು ತಿನ್ಜಿ.
ಪ್ರತಿನಿತ್ಯವೂ ನಿಮ್ಮನ್ನು ನೀವು ಕುಟುಂಬಕ್ಕಾಗಿ ಮೀಸಲಿಡುತ್ತೀರಿ. ನಿಮ್ಮ ದೇಹ ಅನುದಿನ ಕೆಲಸದ ಒತ್ತಡದಿಂದ ಸುಸ್ತಾಗಿರುತ್ತದೆ. ಹೀಗಾಗಿ ಮುಟ್ಟಿನ ಸಮಯದಲ್ಲಿ ಸ್ವಲ್ಪ ಹೆಚ್ಚಿನ ಪ್ರೀತಿ, ವಿಶ್ರಾಂತಿ ಅತೀ ಅಗತ್ಯ. ಹೀಗಾಗಿ ಅನಗತ್ಯ ಒತ್ತಡವನ್ನು ತೆಗೆದುಕೊಳ್ಳದೆ ದೇಹ ನೀಡುವ ಸೂಚನೆಗೆ ಗೌರವ ನೀಡಿ. ಒತ್ತಡ ಕಡಿಮೆ ಮಾಡಿಕೊಂಡ್ರೆ ನೀವು ಮಾನಸಿಕ ಒತ್ತಡದಿಂದ ಮುಕ್ತರಾಗಿ ಸಹಜವಾಗಿ ಇರುವುದಕ್ಕೆ ಸಾಧ್ಯ.
why brain fog happens during periods causes and remedies
