ಬಂಜೆತನದ ಪರೀಕ್ಷೆಗೆ ಹೋದ ಯುವಕನಿಗೆ ಶಾಕ್: ಪುರುಷನ ದೇಹದಲ್ಲೇ ಇತ್ತು ಗರ್ಭಾಶಯ

ದೇಹದ ರಚನೆ ಎನ್ನುವುದು ಪ್ರಕೃತಿಯ ಒಂದು ಅದ್ಭುತ ವಿಸ್ಮಯ. ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣಿನ ಶಾರೀರಿಕ ರಚನೆಗಳು ಪ್ರಕೃತಿಯ ನಿಯಮದಂತೆ ರೂಪುಗೊಳ್ಳುತ್ತವೆ.

By Meghana Pranuth | ಮೇಘನಾ ಪ್ರಣೂತ್‌

2 min read

WhatsAppPost
uterus in his male body
uterus in his male body

ದೇಹದ ರಚನೆ ಎನ್ನುವುದು ಪ್ರಕೃತಿಯ ಒಂದು ಅದ್ಭುತ ವಿಸ್ಮಯ. ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣಿನ ಶಾರೀರಿಕ ರಚನೆಗಳು ಪ್ರಕೃತಿಯ ನಿಯಮದಂತೆ ರೂಪುಗೊಳ್ಳುತ್ತವೆ. ಆದರೆ, ಕೆಲವೊಮ್ಮೆ ಜೀನ್ಗಳಲ್ಲಿ ಉಂಟಾಗುವ ಸಣ್ಣ ವ್ಯತ್ಯಯದಿಂದ ಅಚ್ಚರಿಯ ಸಂಗತಿಗಳು ನಡೆದುಬಿಡುತ್ತವೆ. ಇದಕ್ಕೆ ಉದಾಹರಣೆ, ದೆಹಲಿಯ ಆಸ್ಪತ್ರೆಯೊಂದರಲ್ಲಿ ವರದಿಯಾಗಿರುವ ಅಪರೂಪದ ಪ್ರಕರಣ ವೈದ್ಯರನ್ನೇ ದಂಗಾಗಿಸಿದೆ.

ದೆಹಲಿಯ ಆರ್.ಜಿ. ಆಸ್ಪತ್ರೆಗೆ ಬಂದ 26 ವರ್ಷದ ರಾಜೇಶ್‌ (ಹೆಸರು ಬದಲಿಸಲಾಗಿದೆ) ದಂಪತಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಬಂಜೆತನದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಆಸ್ಪತ್ರೆಗೆ ತೆರಳಿದ್ದರು. ಆದರೆ, ವೈದ್ಯರು ನಡೆಸಿದ ಎಂಆರ್ (MRI) ಮತ್ತು ಆನುವಂಶಿಕ ಪರೀಕ್ಷೆಯ ವರದಿ ನೋಡಿ ಸ್ವತಃ ವೈದ್ಯರೇ ಬೆರಗಾದರು.

ರಾಜೇಶ್ ಅವರ ಜೀನ್ಗಳ ಪ್ರಕಾರ (ಕ್ರೋಮೋಸೋಮ್ಗಳು 46,XY) ಅವರು ಸಂಪೂರ್ಣವಾಗಿ ಪುರುಷರಾಗಿದ್ದರು. ಆದರೆ ಅವರ ದೇಹದ ಒಳಗಡೆ ಮಾತ್ರ ಮಹಿಳೆಯರಂತೆ ಗರ್ಭಾಶಯ (Uterus) ಮತ್ತು ಫ್ಯಾಲೋಪಿಯನ್ ಟ್ಯೂಬ್ಗಳು ಇರುವುದು ಪತ್ತೆಯಾಯಿತು. ತಮ್ಮ ದೇಹದೊಳಗೆ ಇಂತಹದೊಂದು ರಚನೆ ಇದೆ ಎಂದು ರಾಜೇಶ್ ಕನಸಿನಲ್ಲೂ ಊಹಿಸಿರಲಿಲ್ಲ. ವೈದ್ಯಕೀಯ ಲೋಕದಲ್ಲಿ ಅಪರೂಪದ ಸ್ಥಿತಿಯನ್ನು 'ಪರ್ಸಿಸ್ಟೆಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್' (PMDS) ಎಂದು ಕರೆಯಲಾಗುತ್ತದೆ. ಜಗತ್ತಿನಾದ್ಯಂತ ಇದುವರೆಗೆ ವರದಿಯಾಗಿರುವುದು ಕೇವಲ 300 ಪ್ರಕರಣಗಳು ಮಾತ್ರ!

PMDS ಎಂದರೇನು? ಇದು ಹೇಗೆ ಉಂಟಾಗುತ್ತದೆ

ತಾಯಿಯ ಗರ್ಭದಲ್ಲಿ ಭ್ರೂಣ ಬೆಳೆಯುವ ಆರಂಭಿಕ ಹಂತದಲ್ಲಿ ಎಲ್ಲ ಮಕ್ಕಳಲ್ಲೂ ಎರಡು ರೀತಿಯ ನಾಳಗಳು ಇರುತ್ತವೆ. ಹೆಣ್ಣುಮಕ್ಕಳಲ್ಲಿ ಮುಲ್ಲೇರಿಯನ್ ನಾಳಗಳು ಗರ್ಭಾಶಯವಾಗಿ ಬೆಳೆದರೆ, ಗಂಡುಮಕ್ಕಳಲ್ಲಿ 'ವುಲ್ಫಿಯನ್ ನಾಳ' ಪುರುಷ ಅಂಗಗಳ ಬೆಳವಣಿಗೆಗೆ ಸಹಕರಿಸುತ್ತದೆ.

ಗಂಡು ಮಕ್ಕಳಲ್ಲಿ AMH (Anti-Müllerian Hormone) ಎಂಬ ಹಾರ್ಮೋನ್ ಸ್ತ್ರೀ ಅಂಗಗಳ ನಾಳಗಳು ಬೆಳೆಯದಂತೆ ತಡೆಯುತ್ತದೆ.

PMDS ಇರುವವರಲ್ಲಿ ಹಾರ್ಮೋನ್ ಅಥವಾ ಅದರ ಕಾರ್ಯವಿಧಾನ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದಾಗಿ ಹೊರಗಿನಿಂದ ನೋಡಲು ಸಾಮಾನ್ಯ ಪುರುಷರಂತೆ ಕಾಣುವವರ ದೇಹದೊಳಗೆ ಗರ್ಭಾಶಯದಂತಹ ರಚನೆಗಳು ಉಳಿದುಕೊಳ್ಳುತ್ತವೆ.

ಸ್ಥಿತಿಯ ಲಕ್ಷಣಗಳು ಮತ್ತು ಎಚ್ಚರಿಕೆ ವಹಿಸಬೇಕಾದ ಅಂಶಗಳು

ಹೆಚ್ಚಿನ ಸಂದರ್ಭಗಳಲ್ಲಿ ಬಾಲ್ಯದಲ್ಲೇ ಅಂಡಕೋಶಗಳು (Testicles) ಸರಿಯಾಗಿ ಕೆಳಗೆ ಇಳಿಯದ (Undescended testes) ಸಮಸ್ಯೆ ಕಂಡುಬರುತ್ತದೆ. ಆದರೆ ಕೆಲವು ಬಾರಿ ಯಾವುದೇ ಬಾಹ್ಯ ಲಕ್ಷಣಗಳಿಲ್ಲದೆ, ವಯಸ್ಕರಾದ ಬಳಿಕ ಬಂಜೆತನದ ಪರೀಕ್ಷೆ ಮಾಡಿಸುವಾಗ ಇದು ಬೆಳಕಿಗೆ ಬರುತ್ತದೆ.

ಇದು ತಕ್ಷಣಕ್ಕೆ ಜೀವಕ್ಕೆ ಅಪಾಯಕಾರಿಯಲ್ಲ. ಆದರೆ ಹೊಟ್ಟೆಯೊಳಗೆ ದೀರ್ಘಕಾಲ ಉಳಿದುಕೊಳ್ಳುವ ಅಂಡಕೋಶಗಳಿಂದ ಮುಂದೆ ಕ್ಯಾನ್ಸರ್ ಬರುವ ಅಪಾಯವಿರುತ್ತದೆ ಮತ್ತು ಬಂಜೆತನದ ಸಮಸ್ಯೆ ಕಾಡುತ್ತದೆ.

ಅಗತ್ಯವಿದ್ದಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ದೇಹದೊಳಗೆ ಇರುವ ಅಸಹಜ ರಚನೆಗಳು ಮತ್ತು ಅಂಡಕೋಶಗಳನ್ನು ಸುರಕ್ಷಿತವಾಗಿ ತೆಗೆದುಹಾಕುತ್ತಾರೆ.

ಇದು ಜನ್ಮಜಾತವಾಗಿ ಬರುವ ಆನುವಂಶಿಕ ಸ್ಥಿತಿಯೇ ಹೊರತು, ಇದಕ್ಕೆ ಮಗುವಿನಾಗಲಿ ಅಥವಾ ಪೋಷಕರಾಗಲಿ ಯಾವುದೇ ರೀತಿಯಲ್ಲಿ ಕಾರಣರಲ್ಲ. ಒಂದು ವೇಳೆ ಮಕ್ಕಳಲ್ಲಿ ಅಂಡಕೋಶಗಳು ಕೆಳಗೆ ಇಳಿಯದಂತಹ ಲಕ್ಷಣಗಳು ಕಂಡುಬಂದಲ್ಲಿ, ಯಾವುದೇ ತಡ ಮಾಡದೆ ತಕ್ಷಣ ಯೂರೋಲಾಜಿಸ್ಟ್ (ಮೂತ್ರಕೋಶ ತಜ್ಞರು) ಅಥವಾ ಮಕ್ಕಳ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಸುರಕ್ಷಿತ.

Topics

ಸಂಬಂಧಿತ ಸುದ್ದಿಗಳು