ಮಳೆ ಕೊರತೆ ಎಫೆಕ್ಟ್​ : ರಾಜ್ಯದ ಗ್ರಾಮೀಣ ಭಾಗದ ಜನತೆಗೆ ಲೋಡ್​ ಶೆಡ್ಡಿಂಗ್​ ಶಾಕ್​

ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಪ್ರತಿನಿತ್ಯದ ವಿದ್ಯುತ್ ಬೇಡಿಕೆಯು ಸುಮಾರು 7 ದಶಲಕ್ಷ ಯೂನಿಟ್‌ಗಳಷ್ಟು ಹೆಚ್ಚಾಗಿದ್ದು, ಒಟ್ಟು ಬಳಕೆ 92 ದಶಲಕ್ಷ ಯೂನಿಟ್‌ ತಲುಪಿದೆ.

By ರಶ್ಮಿ ಎಸ್. | Rashmi S

1 min read

WhatsAppPost
karnataka rain deficit rural load shedding news
karnataka rain deficit rural load shedding news

ಪ್ರಸಕ್ತ ಸಾಲಿನಲ್ಲಿ ನೈಋತ್ಯ ಮುಂಗಾರು ಕೈಕೊಟ್ಟಿರುವುದು ರಾಜ್ಯದಲ್ಲಿ ಕೇವಲ ನೀರಿನ ಅಭಾವ ಮಾತ್ರವಲ್ಲದೆ, ಇಂಧನ ವಲಯದಲ್ಲೂ ಭಾರಿ ಬಿಕ್ಕಟ್ಟು ಸೃಷ್ಟಿಸಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿರುವುದು ಹಾಗೂ ಗಾಳಿಯ ವೇಗ ಕಡಿಮೆಯಾಗಿ ಪವನ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿರುವುದರಿಂದ ಕರುನಾಡು ಕತ್ತಲೆಯತ್ತ ಜಾರುವ ಭೀತಿ ಎದುರಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಇಂಧನ ಇಲಾಖೆಯು ಅನಿವಾರ್ಯವಾಗಿ ಅಘೋಷಿತ ವಿದ್ಯುತ್ ಕಡಿತದ ಮೊರೆ ಹೋಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಪ್ರತಿನಿತ್ಯದ ವಿದ್ಯುತ್ ಬೇಡಿಕೆಯು ಸುಮಾರು 7 ದಶಲಕ್ಷ ಯೂನಿಟ್‌ಗಳಷ್ಟು ಹೆಚ್ಚಾಗಿದ್ದು, ಒಟ್ಟು ಬಳಕೆ 92 ದಶಲಕ್ಷ ಯೂನಿಟ್‌ ತಲುಪಿದೆ. ಆದರೆ ಮುಂಗಾರು ದುರ್ಬಲಗೊಂಡ ಕಾರಣ ದಕ್ಷಿಣ ಕರ್ನಾಟಕ ಭಾಗದಲ್ಲಿ ವಿಂಡ್ ಪವರ್ ಉತ್ಪಾದನೆ ಗಣನೀಯವಾಗಿ ಇಳಿಕೆಯಾಗಿದೆ. ಈ ಬೇಡಿಕೆ ಮತ್ತು ಪೂರೈಕೆಯ ನಡುವಿನ ಕಂದಕವನ್ನು ಸರಿದೂಗಿಸಲು ಉಷ್ಣವಿದ್ಯುತ್ ಘಟಕಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಅಧಿಕಾರಿಗಳು ಮೌಖಿಕ ಆದೇಶದ ಮೂಲಕ ಶೇ. 30 ರಿಂದ 40 ರಷ್ಟು ಲೋಡ್ ಶೆಡ್ಡಿಂಗ್ ಜಾರಿಗೊಳಿಸುತ್ತಿದ್ದಾರೆ.

ಈ ವಿದ್ಯುತ್ ಕಡಿತದ ತೀವ್ರ ಹೊಡೆತ ಗ್ರಾಮೀಣ ಭಾಗದ ಜನರಿಗೆ ಹಾಗೂ ರೈತಾಪಿ ವರ್ಗಕ್ಕೆ ತಟ್ಟಿದೆ. ಹಳ್ಳಿಗಳಲ್ಲಿ ನಿತ್ಯ 5 ರಿಂದ 6 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ ನೀರು ಹರಿಸಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿವೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಸದ್ಯಕ್ಕೆ ಸಂಜೆ 6.30 ರಿಂದ ರಾತ್ರಿ 9.30 ರವರೆಗೆ ಹಾಗೂ ಮುಂಜಾನೆ ಒಂದು ಗಂಟೆ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಸಾರ್ವಜನಿಕರು ಅನಗತ್ಯ ವಿದ್ಯುತ್ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡುವಂತೆ ಇಲಾಖೆ ಕೋರಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸರ್ಕಾರ ಹೊರರಾಜ್ಯಗಳಿಂದ ದುಬಾರಿ ಬೆಲೆಗೆ ವಿದ್ಯುತ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

Topics

ಸಂಬಂಧಿತ ಸುದ್ದಿಗಳು