ಬ್ರಹ್ಮಪುತ್ರ ನದಿಯಡಿ ಭಾರತದ ಮೊದಲ ನೀರೊಳಗಿನ ರಸ್ತೆ-ರೈಲು ಸುರಂಗ: ₹18,000 ಕೋಟಿ ಯೋಜನೆಗೆ ಅನುಮೋದನೆ

Indias 1st Underwater Road Rail Tunnel: ನವದೆಹಲಿ: ಭಾರತೀಯ ಮೂಲಸೌಕರ್ಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಅಸ್ಸಾಂನ ಬ್ರಹ್ಮಪುತ್ರ ನದಿಯ ಅಡಿಯಲ್ಲಿ ಭಾರತದ ಮೊಟ್ಟಮೊದಲ ‘ನೀರೊಳಗಿನ ರಸ್ತೆ ಮತ್ತು ರೈಲು ಸುರಂಗ’ (Underwater Road-and-Rail Tunnel) ನಿರ್ಮಾಣಕ್ಕೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಶನಿವಾರ ಅನುಮೋದನೆ ನೀಡಿದೆ. ಸುಮಾರು ₹18,662 ಕೋಟಿ ವೆಚ್ಚದ ಈ ಯೋಜನೆಯು ಈಶಾನ್ಯ ರಾಜ್ಯಗಳ ಸಂಪರ್ಕ ಕ್ರಾಂತಿಗೆ ಹೊಸ ವೇಗ ನೀಡಲಿದೆ.

ಬಹುಮುಖಿ ಪ್ರಯೋಜನಗಳು:
ಈ ಸುರಂಗ ಮಾರ್ಗವು ಕೇವಲ ರಸ್ತೆ ಸಂಪರ್ಕವಷ್ಟೇ ಅಲ್ಲದೆ, 11 ಆರ್ಥಿಕ ಕೇಂದ್ರಗಳು, 3 ಸಾಮಾಜಿಕ ಕೇಂದ್ರಗಳು, 8 ಲಾಜಿಸ್ಟಿಕ್ ಹಬ್‌ಗಳು ಮತ್ತು ಪ್ರಮುಖ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸಲಿದೆ. ಇದು ಪ್ರಾದೇಶಿಕ ವ್ಯಾಪಾರ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೊಸ ದಾರಿಗಳನ್ನು ತೆರೆಯಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಅಸ್ಸಾಂನ ದಿಬ್ರುಗಢ್-ಮೊರಾನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಭೂಸ್ಪರ್ಶ ಕ್ಷೇತ್ರದ (ELF) ಉದ್ಘಾಟನೆ ನೆರವೇರಿಸಿದ ಬೆನ್ನಲ್ಲೇ ಈ ಬೃಹತ್ ಯೋಜನೆಗೆ ಅನುಮೋದನೆ ಸಿಕ್ಕಿರುವುದು ವಿಶೇಷವಾಗಿದೆ.

Exit mobile version