FDA, SDA ಎಕ್ಸಾಂಗೆ ನೆಗೆಟಿವ್ ಮಾರ್ಕ್ !ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಬಿಗ್ ಶಾಕ್, ಪರೀಕ್ಷಾ ಅವಧಿ 2 ಗಂಟೆಗೆ ಹೆಚ್ಚಳ
ಎಫ್‌ಡಿಎ ಹುದ್ದೆಗಳಿಗೆ ಕಡ್ಡಾಯವಾಗಿ ಯಾವುದೇ ಪದವಿ ಹಾಗೂ ಎಸ್‌ಡಿಎ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ತೇರ್ಗಡೆಯನ್ನು ಕನಿಷ್ಠ ಮಾನದಂಡವಾಗಿ ಮುಂದುವರಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಸಾಗರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿರುವ ಯುವಜನತೆಗೆ ಆಡಳಿತ ಸುಧಾರಣಾ ಇಲಾಖೆಯು ಭಾರಿ ಆಘಾತ ನೀಡಿದೆ. ನಾಗರಿಕ ಸೇವೆಗಳ ನೇಮಕಾತಿ ನಿಯಮಾವಳಿಗಳಿಗೆ ಮಹತ್ವದ ತಿದ್ದುಪಡಿ ತರಲಾಗುತ್ತಿದ್ದು, ಇದರ ಕರಡು ಪ್ರತಿಯನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ನಡೆಯಲಿರುವ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಋಣಾತ್ಮಕ ಮೌಲ್ಯಮಾಪನ ಅಂದರೆ ನೆಗೆಟಿವ್ ಮಾರ್ಕಿಂಗ್ ಪದ್ಧತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ. ಇನ್ಮುಂದೆ ಅಭ್ಯರ್ಥಿಗಳು ನೀಡುವ ಪ್ರತಿಯೊಂದು ತಪ್ಪು ಉತ್ತರಕ್ಕೂ ಆ ಪ್ರಶ್ನೆಗೆ ನಿಗದಿಯಾಗಿದ್ದ ಅಂಕಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಅಂದರೆ 0.25ನಷ್ಟು ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಕೇವಲ ಅಂದಾಜಿನ ಮೇಲೆ ಉತ್ತರಿಸುವವರಿಗೆ ಇದು ದೊಡ್ಡ ಹಿನ್ನಡೆಯಾಗಲಿದೆ. ಇದರೊಂದಿಗೆ, ನೇಮಕಾತಿ ಪಟ್ಟಿಯಲ್ಲಿ ಪರಿಗಣಿತವಾಗಲು ಅಭ್ಯರ್ಥಿಗಳು ಕನಿಷ್ಠ ಶೇಕಡಾ 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ, ಪರೀಕ್ಷಾರ್ಥಿಗಳಿಗೆ ಸಮಾಧಾನಕರ ವಿಷಯವೆಂದರೆ, ಪ್ರಶ್ನೆಗಳನ್ನು ಸರಿಯಾಗಿ ಓದಿ ಉತ್ತರಿಸಲು ಅನುಕೂಲವಾಗುವಂತೆ ಪರೀಕ್ಷಾ ಅವಧಿಯನ್ನು ಪ್ರಸ್ತುತ ಇರುವ 90 ನಿಮಿಷಗಳಿಂದ ಎರಡು ಗಂಟೆಗಳಿಗೆ ವಿಸ್ತರಿಸಲಾಗಿದೆ.
ವಿದ್ಯಾರ್ಹತೆಯ ವಿಷಯದಲ್ಲಿ ಎಫ್‌ಡಿಎ ಹುದ್ದೆಗಳಿಗೆ ಕಡ್ಡಾಯವಾಗಿ ಯಾವುದೇ ಪದವಿ ಹಾಗೂ ಎಸ್‌ಡಿಎ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ತೇರ್ಗಡೆಯನ್ನು ಕನಿಷ್ಠ ಮಾನದಂಡವಾಗಿ ಮುಂದುವರಿಸಲಾಗಿದೆ. ಪತ್ರಿಕೆ-2 ರ ಪಠ್ಯಕ್ರಮವನ್ನು ಇಲಾಖೆಗಳ ಸ್ವರೂಪ ಮತ್ತು ಅಗತ್ಯಕ್ಕೆ ತಕ್ಕಂತೆ ನೇಮಕಾತಿ ಪ್ರಾಧಿಕಾರಗಳು ರೂಪಿಸಲಿವೆ.
ಮತ್ತೊಂದು ಗಮನಾರ್ಹ ಬದಲಾವಣೆಯೆಂದರೆ, ಆಯ್ಕೆಯಾದ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಅವರ ಅವಕಾಶ ರದ್ದಾಗಿ, ಕಾಯ್ದಿರಿಸಿದ ಹೆಚ್ಚುವರಿ ಪಟ್ಟಿಯಲ್ಲಿರುವ ಅರ್ಹರಿಗೆ ಮನ್ನಣೆ ಸಿಗಲಿದೆ.
ಜೊತೆಗೆ ನಿಯೋಜನೆಗೊಂಡ ಅಭ್ಯರ್ಥಿಗಳು ರಾಜ್ಯದ ಯಾವುದೇ ಭಾಗದಲ್ಲೂ ಸೇವೆ ಸಲ್ಲಿಸಲು ಮಾನಸಿಕವಾಗಿ ಸಿದ್ಧರಿರಬೇಕು ಎಂದು ಕಟ್ಟುನಿಟ್ಟಾಗಿ ಹೇಳಲಾಗಿದೆ. ಸದ್ಯ ಬಿಡುಗಡೆಯಾಗಿರುವ ಈ ನಿಯಮಾವಳಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶವಿದ್ದು, ಆ ಬಳಿಕ ಅಂತಿಮ ಅಧಿಸೂಚನೆ ಹೊರಬೀಳಲಿದೆ.
Topics
ಸಂಬಂಧಿತ ಸುದ್ದಿಗಳು
job
ಶೀಘ್ರದಲ್ಲೇ ಕೊನೆಗೊಳ್ಳಲಿದೆ RRB JE ಅರ್ಜಿ ಸಲ್ಲಿಕೆ ! ಜೂನಿಯರ್ ಎಂಜಿನಿಯರ್ ಆಗುವ ಅವಕಾಶ ತಪ್ಪಿಸಿಕೊಳ್ಳಬೇಡಿ!
job
NIC ನೇಮಕಾತಿ 2026 : 376 ಸೈಂಟಿಫಿಕ್/ಟೆಕ್ನಿಕಲ್ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
job
BOI SO ನೇಮಕಾತಿ 2026 : ಈ ದಿನದಿಂದ 200 ಕ್ಕೂ ಹೆಚ್ಚು ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ!
job

