ಹೈನುಗಾರಿಕೆಯಲ್ಲಿ ತೊಡಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬಯಸುವ ಮಹಿಳೆಯರಿಗೆ ಸರ್ಕಾರ ಉತ್ತಮ ಅವಕಾಶ ನೀಡಿದೆ. ಹಸು ಮತ್ತು ಎಮ್ಮೆ ಖರೀದಿಸಲು ಆರ್ಥಿಕ ನೆರವು ನೀಡುವ ಯೋಜನೆಗಾಗಿ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಣಿಬಾಧಿತ ಗ್ರಾಮಗಳಲ್ಲಿ ವಾಸಿಸುವ ಅರ್ಹ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಸಿಇಪಿಎಂಐಜೆಡ್ ಯೋಜನೆಯಡಿ ಎರಡು ಮಿಶ್ರತಳಿ ಹಸುಗಳು ಅಥವಾ ಉತ್ತಮ ತಳಿಯ ಎಮ್ಮೆಗಳನ್ನು ಖರೀದಿಸಲು ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳಲ್ಲಿ ನೋಂದಾಯಿಸಿಕೊಂಡು ಸಕ್ರಿಯ ಸದಸ್ಯರಾಗಿರುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಯೋಜನೆಯ ಉದ್ದೇಶ ಗ್ರಾಮೀಣ ಮಹಿಳೆಯರ ಆದಾಯ ಹೆಚ್ಚಿಸಿ ಹೈನುಗಾರಿಕೆಯನ್ನು ಉತ್ತೇಜಿಸುವುದಾಗಿದೆ.
ಅರ್ಜಿ ಸಲ್ಲಿಸಲು ವಿಜಯನಗರ ಜಿಲ್ಲಾ ಆಡಳಿತದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿದ್ದು, ಕೊನೆಯ ಕ್ಷಣದವರೆಗೆ ಕಾಯದೆ ಶೀಘ್ರದಲ್ಲೇ ಅರ್ಜಿ ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಯೋಜನೆ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಅಥವಾ ಅರ್ಜಿ ಸಲ್ಲಿಸುವಲ್ಲಿ ನೆರವು ಅಗತ್ಯವಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಅಥವಾ ಸಮೀಪದ ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಹೈನುಗಾರಿಕೆ ಆರಂಭಿಸಿ ಹೆಚ್ಚುವರಿ ಆದಾಯ ಗಳಿಸಲು ಇದು ಉತ್ತಮ ಅವಕಾಶವಾಗಿದ್ದು, ಅರ್ಹ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.
