ರಾಮನಗರ ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ನಡೆದ ಕೌಟುಂಬಿಕ ದುರಂತವೊಂದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪತ್ನಿಯ ಶೀಲದ ಬಗ್ಗೆ ಅನುಮಾನ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಹತ್ಯೆಗೈದು ಬಳಿಕ ಸ್ವತಃ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
42 ವರ್ಷದ ನಾಗಮ್ಮ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದ್ದು, ಅವರ ಪತಿ ಕಣಿ ಮಾದಯ್ಯನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಂಪತ್ಯದಲ್ಲಿ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯಗಳು ಮತ್ತು ಅನುಮಾನಗಳು ಮನೆ ಮಾಡಿದ್ದವು ಎನ್ನಲಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಒಂದೇ ಮನೆಯಲ್ಲಿದ್ದರೂ ದಂಪತಿ ಕೆಲವು ಸಮಯದಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಪತ್ನಿ ಯಾರೊಂದಿಗಾದರೂ ಮಾತನಾಡಿದರೂ ಅನುಮಾನ ಪಡುವ ಸ್ವಭಾವ ಆರೋಪಿಗೆ ಇತ್ತು ಎಂದು ತಿಳಿದುಬಂದಿದೆ.
ಭಾನುವಾರ ಈ ಅನುಮಾನ ತೀವ್ರ ಸ್ವರೂಪ ಪಡೆದು ಜಗಳಕ್ಕೆ ಕಾರಣವಾಗಿದ್ದು, ಅದು ಕೊನೆಗೆ ಹತ್ಯೆಯಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ. ಘಟನೆಯ ನಂತರ ಆರೋಪಿ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾನೆ.
ಮೃತ ನಾಗಮ್ಮ ಅವರು ಹಿಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದರು ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ. ಇತ್ತೀಚೆಗೆ ಮತ್ತೊಬ್ಬ ವ್ಯಕ್ತಿಯ ಮೇಲೂ ಅನುಮಾನ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.
