ಹೃದಯಾಘಾತದ ತುರ್ತು ಸಂದರ್ಭದಲ್ಲಿ ಉಚಿತವಾಗಿ ಸಿಗಲಿದೆ ‘ಜೀವ ಸಂಜೀವಿನಿ’!

ಸ್ಯಾಂಡಲ್‌ವುಡ್‌ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಈಗಾಗಲೇ ರಾಜ್ಯದಲ್ಲಿ ಪುನೀತ್ ಹೃದಯ ಜ್ಯೋತಿ ಯೋಜನೆ ಜಾರಿಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂತಹ ಪ್ರಕರಣಗಳ ತಡೆಗೆ ಮಹತ್ವದ ಕ್ರಮ ಕೈಗೊಂಡಿದೆ. ಸ್ಯಾಂಡಲ್‌ವುಡ್‌ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಈಗಾಗಲೇ ರಾಜ್ಯದಲ್ಲಿ ಪುನೀತ್ ಹೃದಯ ಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಇದೀಗ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಆರೋಗ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಪ್ರತಿ ತಾಲೂಕುಗಳಿಗೂ ಈ ಯೋಜನೆಯನ್ನು ಶೀಘ್ರದಲ್ಲಿಯೇ ವಿಸ್ತರಿಸಲಿದ್ದೇವೆ ಎಂದಿದ್ದಾರೆ.

ಈ ಸಂಬಂಧ ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ 78 ಕಡೆಗಳಲ್ಲಿ ಪುನೀತ್ ಹೃದಯ ಜ್ಯೋತಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಪಾಯದ ಹಂತದಲ್ಲಿದ್ದ ರೋಗಿಗಳ ಪಾಲಿಗೆ ಸಂಜೀವಿನಿಯಂತೆ ಕೆಲಸ ಮಾಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮೂರು ಕೇಂದ್ರಗಳಲ್ಲಿ ಹೃದಯ ಜ್ಯೋತಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ರಾಜ್ಯದಲ್ಲಿ ಇಂದಿನಿಂದ 5 ದಿನ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ

ಪುನೀತ್ ಹೃದಯ ಜ್ಯೋತಿ ಯೋಜನೆಯ ಮೂಲಕ ರಾಜ್ಯದಲ್ಲಿ ಈಗಾಗಲೇ ಅಪಾಯ ಹಂತದಲ್ಲಿದ್ದ 450 ರೋಗಿಗಳು ಜೀವದಾನ ಪಡೆದಿದ್ದಾರೆ. ಹೃದಯಾಘಾತದ ಲಕ್ಷಣಗಳು ಕಂಡುಬಂದ ಸಂದರ್ಭದಲ್ಲಿ , ಗೋಲ್ಡನ್ ಅವರ್ನಲ್ಲಿ ರೋಗಿಯನ್ನು ಪುನೀತ್ ಹೃದಯಜ್ಯೋತಿ ಕೇಂದ್ರಕ್ಕೆ ಕುಟುಂಬಸ್ಥರು ಕರೆ ತಂದರೆ, ಅವರಿಗೆ ಟೆನೆಕ್ಟೆಪ್ಲೇಸ್ ಎಂಬ ಅತ್ಯಂತ ದುಬಾರಿ ಇಂಜೆಕ್ಷನ್ನ್ನು ಉಚಿತವಾಗಿ ನೀಡಲಾಗುತ್ತದೆ.

ಇದರಿಂದ ರೋಗಿಯ ಪ್ರಾಣ ಉಳಿಸಬಹುದು. ಬಳಿಕ ಮುಂದಿನ ಚಿಕಿತ್ಸೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಬಹುದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಗ್ರಾಮೀಣ ಭಾಗದ ಜನತೆಗೂ ಈ ಯೋಜನೆಯ ಲಾಭ ದೊರಕಬೇಕು, ಅವರಿಗೂ ಜೀವ ರಕ್ಷಣೆ ದೊರಕಬೇಕು ಎಂಬ ಉದ್ದೇಶದೊಂದಿಗೆ ಶೀಘ್ರದಲ್ಲಿಯೇ ಪ್ರತಿ ತಾಲೂಕುಗಳಲ್ಲಿಯೂ ಪುನೀತ್ ಹೃದಯ ಜ್ಯೋತಿ ಕಾರ್ಯಾರಂಭ ಮಾಡಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Exit mobile version