ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಮುಂಗಾರು ಮಳೆಯ ಪ್ರವೇಶವಾಗಿದ್ದರೂ, ಅದರ ಆರಂಭಿಕ ಲೆಕ್ಕಾಚಾರಗಳು ಸಂಪೂರ್ಣ ಉಲ್ಟಾ ಆಗಿವೆ. ಮಳೆಗಾಗಿ ಕಾಯುತ್ತಿರುವ ಜನತೆಗೆ ಹವಾಮಾನ ಇಲಾಖೆಯು ಜೂನ್ 15 ರಿಂದ 20ರ ವರೆಗಿನ ಹೊಸ ಮುನ್ಸೂಚನೆಯನ್ನು ನೀಡಿದ್ದು, ಕೆಲವು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿದ್ದರೆ, ಇನ್ನು ಕೆಲವು ಕಡೆ ಬಿಸಿಲಿನ ಬೇಗೆ ಮುಂದುವರಿಯಲಿದೆ.
ರಾಜಧಾನಿ ಬೆಂಗಳೂರಿನ ಜನತೆಗೆ ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಮೈಸೂರು, ಮಂಡ್ಯ, ಕೋಲಾರ ಮತ್ತು ತುಮಕೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡದ ಘಟ್ಟ ಪ್ರದೇಶಗಳ ಕೆಳಭಾಗದಲ್ಲಿ ಮಳೆಯ ಸಿಂಚನ ಮುಂದುವರಿಯಲಿದೆ.
ಇದನ್ನೂ ಓದಿ : ರಾಜಧಾನಿ ಬೆಂಗಳೂರಿನಲ್ಲಿ ನಿರಂತರ ಮಳೆಯ ಅಬ್ಬರ; ರಸ್ತೆಗಳೆಲ್ಲ ಜಲಾವೃತ
ಮತ್ತೊಂದೆಡೆ, ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಉತ್ತರ ಒಳನಾಡಿನ ಜನತೆಗೆ ಜೂನ್ 18 ರಿಂದ ಸಿಹಿಸುದ್ದಿ ಸಿಗಲಿದ್ದು, ಈ ಭಾಗದಲ್ಲಿ ಮಳೆರಾಯನ ಎಂಟ್ರಿಯಾಗುವ ನಿರೀಕ್ಷೆ ಇದೆ. ಆದರೆ ಚಾಮರಾಜನಗರ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನವೇ ಹೆಚ್ಚಿರಲಿದೆ.ಈ ಬಾರಿಯ ಮುಂಗಾರು ಆರಂಭದಲ್ಲಿ ದುರ್ಬಲವಾಗಿರುವುದು ಆತಂಕ ಮೂಡಿಸಿದೆ.
ಜೂನ್ ತಿಂಗಳ ಅಂತ್ಯದ ವೇಳೆಗೆ ‘ಎಲ್ನಿನೋ’ ಪ್ರಭಾವ ಅಧಿಕವಾಗಲಿದ್ದು, ನವೆಂಬರ್ ವೇಳೆಗೆ ಇದು ತೀವ್ರ ರೂಪ ಪಡೆದುಕೊಳ್ಳಬಹುದು ಎಂದು ವರದಿಗಳು ಎಚ್ಚರಿಸಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತೀವ್ರ ನೀರಿನ ಕ್ಷಾಮ ಎದುರಾಗುವ ಲಕ್ಷಣಗಳಿರುವುದರಿಂದ, ಸಾರ್ವಜನಿಕರು ಈಗ ಬೀಳುತ್ತಿರುವ ಮಳೆ ನೀರನ್ನು ಕೃಷಿ ಹೊಂಡ ಹಾಗೂ ಚೆಕ್ ಡ್ಯಾಂಗಳ ಮೂಲಕ ಹನಿ-ಹನಿಯಾಗಿ ಸಂರಕ್ಷಿಸಿಕೊಳ್ಳಬೇಕು ಎಂದು ತಜ್ಞರು ಜಾಗೃತಿ ಮೂಡಿಸಿದ್ದಾರೆ.
