ರಾಜಧಾನಿ ಬೆಂಗಳೂರಿನಲ್ಲಿ ನಿರಂತರ ಮಳೆಯ ಅಬ್ಬರ; ರಸ್ತೆಗಳೆಲ್ಲ ಜಲಾವೃತ
ರಾಜಧಾನಿ ಬೆಂಗಳೂರಿನಲ್ಲಿ ನಿರಂತರ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ, ಮನೆಗೆ ತೆರಳುತ್ತಿದ್ದ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.

ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಚುರುಕುಗೊಂಡಿದ್ದು, ಭಾನುವಾರ ಸಂಜೆ ಕೂಡ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯಿತು. ಸಂಜೆ ವೇಳೆಗೆ ಮೋಡ ಕವಿದ ವಾತಾವರಣದ ನಡುವೆ ಆರಂಭವಾದ ಮಳೆ, ಕೆಲವೇ ನಿಮಿಷಗಳಲ್ಲಿ ಭಾರೀ ಸ್ವರೂಪ ಪಡೆದು ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.
ಮಳೆ ಹೆಚ್ಚಾಗುತ್ತಿದ್ದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೆಲವೆಡೆ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ನಿಧಾನಗತಿಯಲ್ಲಿ ಸಂಚರಿಸುವಂತಾಯಿತು. ಕಚೇರಿಯಿಂದ ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿಕೊಂಡು ಪರದಾಡಿದರು.
ಮೆಜೆಸ್ಟಿಕ್, ಟೌನ್ ಹಾಲ್, ಶೇಷಾದ್ರಿಪುರಂ, ಮಲ್ಲೇಶ್ವರಂ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ರಾಜಾಜಿನಗರ, ವಿಜಯನಗರ, ಶಾಂತಿನಗರ ಮತ್ತು ಮಡಿವಾಳ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮಧ್ಯಾಹ್ನದವರೆಗೆ ತುಂತುರು ಮಳೆಯಿದ್ದರೂ ಸಂಜೆ ವೇಳೆಗೆ ಮಳೆಯ ತೀವ್ರತೆ ಹೆಚ್ಚಾಯಿತು.
ದಿಢೀರ್ ಮಳೆಯಿಂದಾಗಿ ರಸ್ತೆ ಬದಿಯ ವ್ಯಾಪಾರಿಗಳು ಸಂಕಷ್ಟ ಅನುಭವಿಸಿದರು. ಮಳೆ ನೀರು ಅಂಗಡಿಗಳ ಮುಂದೆ ನುಗ್ಗಿದ ಪರಿಣಾಮ ಕೆಲ ವ್ಯಾಪಾರಿಗಳು ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ದೃಶ್ಯಗಳು ಕಂಡುಬಂದವು. ಸಾರ್ವಜನಿಕರು ಛತ್ರಿ ಹಿಡಿದು ಮಳೆಯಲ್ಲೇ ತಮ್ಮ ಗಮ್ಯಸ್ಥಾನ ತಲುಪಲು ಹರಸಾಹಸ ಪಟ್ಟರು.
ಕೆಲ ಪ್ರಮುಖ ಜಂಕ್ಷನ್‌ಗಳಲ್ಲಿ ಮೊಣಕಾಲು ಮಟ್ಟದ ನೀರು ನಿಂತ ಪರಿಣಾಮ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ತೊಂದರೆ ಅನುಭವಿಸಿದರು. ಹಲವರು ತಮ್ಮ ವಾಹನಗಳನ್ನು ತಳ್ಳಿಕೊಂಡೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೆಲ ವಾಹನಗಳು ನೀರಿನಲ್ಲಿ ಸಿಲುಕಿ ಸ್ಥಗಿತಗೊಂಡ ಘಟನೆಗಳೂ ವರದಿಯಾಗಿವೆ.
ಮಳೆಯಿಂದ ತಪ್ಪಿಸಿಕೊಳ್ಳಲು ನೂರಾರು ಜನರು ಫ್ಲೈಓವರ್‌ಗಳು ಹಾಗೂ ಸ್ಕೈವಾಕ್‌ಗಳ ಕೆಳಗೆ ಆಶ್ರಯ ಪಡೆದರು. ವಿಶೇಷವಾಗಿ ಕೆ.ಆರ್. ಮಾರ್ಕೆಟ್ ಭಾಗದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆ ಅನೇಕ ಬೈಕ್ ಸವಾರರು ಫ್ಲೈಓವರ್ ಕೆಳಗೆ ನಿಂತು ಮಳೆ ಕಡಿಮೆಯಾಗುವವರೆಗೆ ಕಾಯುತ್ತಿರುವುದು ಕಂಡುಬಂತು.
ಮಳೆ ಒಂದು ಕಡೆ ನಗರಕ್ಕೆ ತಂಪಿನ ವಾತಾವರಣ ತಂದಿದ್ದರೂ, ಮತ್ತೊಂದೆಡೆ ಸಂಚಾರ ದಟ್ಟಣೆ ಮತ್ತು ಜಲಾವೃತ ಸಮಸ್ಯೆಗಳಿಂದ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಯಿತು. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲೂ ಮಳೆಯ ಸಾಧ್ಯತೆ ಇರುವುದರಿಂದ ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.



